
ಇಸ್ಲಾಮಾಬಾದ್: ಪಾಕಿಸ್ತಾನ ಕೋರ್ಟ್ ಮುಂಬೈ ದಾಳಿಯ ಪ್ರಮುಖ ರೂವಾರಿ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಪಾಕಿಸ್ತಾನ ಸರ್ಕಾರ ತಡೆವೊಡ್ಡಿದೆ.
ಇನ್ನೂ ಒಂದು ತಿಂಗಳು ಉಗ್ರ ಲಖ್ವಿಯನ್ನು ಬಿಡುಗಡೆಗೊಳಿಸಬಾರದು ಎಂದು ಸೂಚಿಸುವ ಮೂಲಕ ಪಾಕಿಸ್ತಾನ ಸರ್ಕಾರ ಲಖ್ವಿ ಬಂಧನ ಅವಧಿ ವಿಸ್ತರಿಸಿದೆ.
ಲಖ್ವಿ ಬಂಧನ ಕಾನೂನಿಗೆ ವಿರುದ್ಧ ಎಂದು ಹೇಳಿ, ಲಖ್ವಿ ಬಿಡುಗಡೆಗೆ ಪಾಕ್ ಹೈಕೋರ್ಟ್ ಆದೇಶಿಸಿತ್ತು. ಇಂದು ಲಖ್ವಿ ಜೈಲಿನಿಂದ ಬಿಡುಗಡೆಗೊಳ್ಳಬೇಕಿತ್ತು. ಆದರೆ, ಪಾಕ್ ಸರ್ಕಾರ ಬಿಡುಗಡೆಗೆ ತಡೆವೊಡ್ಡಿದೆ ಎಂದು ಮೂಲಗಳು ತಿಳಿಸಿವೆ.
ಪಾಕ್ ಸರ್ಕಾರದ ಈ ಕ್ರಮಕ್ಕೆ ಲಖ್ವಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದ ಒತ್ತಡಕ್ಕೆ ಹೆದರಿ ಪಾಕ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಾಕ್ ಸರ್ಕಾರದ ಈ ನಡೆ ಕಾನೂನನ್ನು ಉಲ್ಲಂಘನೆ ಮಾಡಿದಂತಾಗಿದೆ. ಭಾರತದ ಒತ್ತಡಕ್ಕೆ ಮಣಿದು ಲಖ್ವಿಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬಿಡುಗಡೆ ಆದೇಶಕ್ಕೆ ಭಾರತ ವಿರೋಧ ವ್ಯಕ್ತಪಡಿಸಿ, ಪಾಕ್ ಹೈ ಕಮಿಷನರ್ ಸಮನ್ಸ್ ಜಾರಿ ಮಾಡಿತ್ತು.
Advertisement