

ಮುಂಬೈ: ಧರ್ಮ ಹಾಗೂ ಆಚರಣೆಗಳ ತೀರ್ಪಿನಲ್ಲಿ ನ್ಯಾಯಾಲಯಗಳು ತಾರತಮ್ಯ ಮಾಡಬಾರದು ಎಂದು ಶಿವಸೇನೆ ನ್ಯಾಯಾಲಯಕ್ಕೆ ಸೋಮವಾರ ಸಲಹೆ ನೀಡಿದೆ.
ಸಾರ್ವಜನಿಕ ಸಮಾರಂಭಗಳಿಂದ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆಗಳು ಎದುರಾಗುತ್ತದೆ ಎಂಬ ಕಾರಣಕ್ಕೆ ಮುಂಬೈ ಹೈಕೋರ್ಟ್ ಸಾರ್ವಜನಿಕ ಸಮಾರಂಭಗಳಿಗೆ ನಗರದಲ್ಲಿ ನಿಷೇಧ ಹೇರಿತ್ತು.
ನ್ಯಾಯಾಲಯದ ಈ ತೀರ್ಮಾನಕ್ಕೆ ತೀವ್ರ ಅಸಮಾಧಾನಗೊಂಡಿರುವ ಶಿವಸೇನೆ ಧರ್ಮ, ನಂಬಿಕೆ, ಆಚರಣೆ ಎಂಬುದು ಭಾರತೀಯರ ಪಾರಂಪರಿಕ ಸಂಸ್ಕೃತಿ ಇಂತಹ ನಂಬಿಕೆ, ಧರ್ಮಗಳ ಕುರಿತಂತೆ ತೀರ್ಪು ನೀಡುವಾಗ ನ್ಯಾಯಾಲಯ ಎರಡೂ ಕಡೆಗಳಿಂದಲೂ ಅಭಿಪ್ರಾಯ ಸಂಗ್ರಹಿಸಬೇಕು. ತೀರ್ಪಿನಲ್ಲಿ ತಾರತಮ್ಯ ಮಾಡುವುದು ನ್ಯಾಯಾಲಯಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಶಿವಸೇನೆ ತನ್ನ ಮುಖಪುಟ ಸಾಮ್ನಾದಲ್ಲಿ ಹೇಳಿಕೊಂಡಿದೆ.
ನ್ಯಾಯಾಲಯದ ತೀರ್ಮಾನದ ಹಿಂದೆ ಹಲವು ಎನ್ ಜಿಒಗಳ ಕಾರ್ಯಕರ್ತರಿದ್ದಾರೆ. ಇದರಿಂದಾಗಿಯೇ ನ್ಯಾಯಾಲಯ ಬಹುತೇಕರು ತೀರ್ಪಿನ ಪರವಾಗಿದ್ದಾರೆ ಎಂದು ಆದೇಶ ಹೊರಡಿಸಿದೆ. ಒಂದು ವೇಳೆ ನ್ಯಾಯಾಲಯ ತೀರ್ಪನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಗಳನ್ನು ಕೈಗೊಂಡರೆ, ಆಚರಣೆಗಳ ನಿರ್ಧಾರ ವ್ಯಕ್ತಿಗತವಾಗುತ್ತದೆ. ಇದರಿಂದ ತೀರ್ಮಾನದ ಪರವಾಗಿ ಬಹುಸಂಖ್ಯಾತರಿದ್ದಾರೆಂಬ ಎನ್ ಜಿಒಗಳ ಮಾಹಿತಿ ಸುಳ್ಳಾಗುತ್ತದೆ. ಆಚರಣೆಗಳನ್ನು ನಿಷೇಧಿಸಿದರೆ ಅಥವಾ ನಿಯಮಗಳನ್ನು ಹೇರಿದರೆ ಸಮಾಜದ ಶಕ್ತಿಯನ್ನು ಕುಗ್ಗುತ್ತದೆ ಮತ್ತು ಸಮಾಜಕ್ಕೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದಂತಾಗುತ್ತದೆ ಎಂದು ಹೇಳಿದೆ.
ನ್ಯಾಯಾಲಯ ಇರುವುದು ಎಲ್ಲರಿಗೂ ಸಮಾನ ರೀತಿಯಲ್ಲಿ ನ್ಯಾಯವನ್ನು ಒದಗಿಸುವ ಸಲುವಾಗಿ ಎಂಬುದನ್ನು ನ್ಯಾಯಾಲಯಗಳು ನೆನಪಿನಲ್ಲಿಡಬೇಕು. ಅಗತ್ಯವಿಲ್ಲದ ಕಡೆ ನ್ಯಾಯಾಲಯಗಳು ಮಧ್ಯೆ ಪ್ರವೇಶಿಸಿ ಏಕಪಕ್ಷೀಯವಾಗಿ ತೀರ್ಮಾನ ನೀಡಬಾರದು ಎಂದು ಬರೆಯುವ ಮೂಲಕ ನ್ಯಾಯಾಲಯಕ್ಕೆ ಸಲಹೆ ನೀಡಿದೆ.