
ಕೊಚ್ಚಿ: ಕೇರಳ ವಿಧಾನಸಭೆಯಲ್ಲಿ ಎರಡು ದಿನಗಳ ಹಿಂದಷ್ಟೆ ನಡೆದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೋಲಾಹಲಕ್ಕೆ ಸಂಬಂಧಿಸಿದಂತೆ ಸೋಮವಾರ ಐವರು ಎಲ್‌ಡಿಎಫ್ ಶಾಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.
ಕಳೆದ ಶುಕ್ರವಾರ ಬಜೆಟ್ ಅಧಿವೇಶನದ ವೇಳೆ ಸ್ಪೀಕರ್ ಕುರ್ಚಿ ಧ್ವಂಸಗೊಳಿಸಿದ ಆರೋಪದ ಮೇಲೆ ಎಲ್‌ಡಿಎಫ್‌ನ ಕೆ.ಕುಂಜಹಮ್ಮದ್ ಮಾಸ್ಟರ್, ಇಪಿ ಜಯರಾಜನ್, ಕೆ.ಅಜಿತ್ ಕೆ.ಟಿ. ಜಲೀಲ್ ಹಾಗೂ ವಿ ಶಿವನ್ ಕುಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.
ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರು ಶಾಸಕರ ವಿರುದ್ಧ ಅಮಾನತು ಗೊತ್ತುವಳಿ ಮಂಡಿಸಿದರು.
ಈ ಮಧ್ಯೆ, ಸಿಪಿಐ-ಎಂ ನಾಯಕ ವಿ.ಎಸ್. ಅಚ್ಚುತಾನಂದನ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು 'ಏಕಪಕ್ಷಿಯ' ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ಮಹಿಳಾ ಶಾಸಕರೊಂದಿಗೆ ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿವೆ.
ಕೇರಳ ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೆ.ಎಂ ಮಾಣಿ ಬಜೆಟ್ ಮಂಡನೆ ವೇಳೆ ವಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದ್ದವು. ಮಾಣಿ ವಿರುದ್ಧ ಬಾರ್ ಲೈಸೆನ್ಸ್ ಗೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಣಿ ಅವರು ಬಜೆಟ್ ಮಂಡನೆ ಮಾಡದಂತೆ ವಿಪಕ್ಷ ಸಿಪಿಎಂ ತೀವ್ರ ಪ್ರತಿಭಟನೆ ನಡೆಸಿದೆ ಈ ನಡುವೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಸಿಪಿಎಂ ಶಾಸಕರು ಪರಸ್ಪರ ಕೈ ಕೈ ಮೀಲಾಯಿಸಿದ್ದರು.
Advertisement