
ನವದೆಹಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತಂತೆ ಚರ್ಚೆಗೆ ಆಗಮಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
ಭೂ ಸುಗ್ರೀವಾಜ್ಞೆ ತಿದ್ದುಪಡಿ ಮಸೂದೆ ರೈತರ ಪರವಾಗಿದ್ದು, ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಡ್ಕರಿ ಅವರು ಚರ್ಚೆಗೆ ಆಗಮಿಸುವಂತೆ ಸೋನಿಯಾ ಗಾಂಧಿ ಹಾಗೂ ಅಣ್ಣಾ ಹಜಾರೆ ಜೊತೆಗೆ ಎಲ್ಲಾ ಪಕ್ಷಗಳಿಗೂ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಪತ್ರದಲ್ಲಿ ನಾನು ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ವೇದಿಕೆಯಲ್ಲಿಯಾದರೂ ಭೂ ಕಾಯ್ದೆ ತಿದ್ದುಪಡಿ ಕುರಿತಂತೆ ಚರ್ಚಿಸಲು ಸಿದ್ದನಿದ್ದೇನೆ ಎಂದು ಗಡ್ಕರಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿತಿನ್ ಗಡ್ಕರಿ ಅವರಿಗೆ ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಒಮ್ಮತಗಳಿಸುವಂತಹ ಜವಾಬ್ದಾರಿಯನ್ನು ನೀಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿಯೇ ಗಡ್ಕರಿ ಅವರು ಚರ್ಚೆಗೆ ಆಗಮಿಸುವಂತೆ ಎಲ್ಲಾ ಪಕ್ಷದವರಿಗೂ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೈತರು ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸಹಾಯವಾಗುವಂತಹ ಕಾಯ್ದೆಯನ್ನು ಜಾರಿಗೆ ತರಬೇಕು. ಪ್ರಸ್ತುತ ಅಧಿಕಾರದಲ್ಲಿರುವ ಮೋದಿ ಸರ್ಕಾರ, ತಿದ್ದುಪಡಿ ಮಾಡಿರುವ ಭೂ ಸ್ವಾಧೀನ ಕಾಯ್ದೆ ರೈತರ ಪರವಾಗಿಲ್ಲ ಎಂದು 14 ವಿರೋಧ ಪಕ್ಷಗಳು ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಅಲ್ಲದೆ, ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು. ಇದರಲ್ಲಿ ಪ್ರಮುಖವಾಗಿ ಅಣ್ಣಾ ಹಜಾರೆ ಹಾಗೂ ಸೋನಿಯಾ ಗಾಂಧಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
Advertisement