ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ಡೆಹ್ರಾಡೂನ್-ವಾರಣಾಸಿ ಜನತಾ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಹಳಿ ತಪ್ಪಿದ ಪರಿಣಾಮ ಘಟನೆಯಲ್ಲಿ 30 ಪ್ರಯಾಣಿಕರು ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಯ್‌ಬರೇಲಿ ಜಿಲ್ಲೆಯ ಬಚ್ಚರವಾನ್ ಬಳಿ ಬೆಳಗ್ಗೆ ಸುಮಾರು 9.30ರ ಸುಮಾರಿನಲ್ಲಿ ಜನತಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ರೈಲಿನ ಮೂರು ಬೋಗಿಗಳು ನೆಲಕ್ಕುರುಳಿದ್ದು, 30 ಪ್ರಯಾಣಿಕರು ಮೃತಪಟ್ಟಿದ್ದು, ಅಲ್ಲದೆ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಲಖನೌನ ವಿಭಾಗೀಯ ಆಯುಕ್ತ ಮಹೇಶ್ ಗುಪ್ತಾ ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಎಕ್ಸ್‌ಪ್ರೆಸ್ ರೈಲು ಬ್ರೇಕ್ ವೈಫಲ್ಯದಿಂದ ಹಳಿ ತಪ್ಪಿದೆ ಎಂದು ಹೇಳಲಾಗಿದೆ. ರೈಲು ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ ಮಿತ್ತಲ್ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಗ್ರಾಮಸ್ಥರು ಘಟನಾ ಸ್ಥಳದಲ್ಲಿ ನಿರತರಾಗಿದ್ದರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದಾರೆ.
ಪರಿಹಾರ ಘೋಷಣೆ
ದುರಂತದಲ್ಲಿ ಮಡಿದವರಿಗೆ ರೈಲ್ವೆ ಮಂಡಳಿ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿರುವವರಿಗೆ ತಲಾ 50 ಸಾವಿರ ಮತ್ತು ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ 20 ಸಾವಿರ ಪರಿಹಾರ ಘೋಷಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದುರಂತದಲ್ಲಿ ಮಡಿದವರಿಗೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
Advertisement