
ನವದೆಹಲಿ: ಇಸ್ಲಾಮಿಕ್ ಇರಾಕ್ ನ ಉಗ್ರರು ಅಮೆರಿಕ ಯೋಧರ ಕುಟುಂಬಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಕರೆ ನೀಡಿದ್ದು, ಅಮೆರಿಕದಾದ್ಯಂತ ಎಲ್ಲಾ ಯೋಧರ ಕುಟುಂಬಸ್ಥರಿಗೆ ಭದ್ರತೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಇಸಿಸ್ ಉಗ್ರ ಸಂಘಟನೆಯ ಕೆಂಗಣ್ಣು ಇದೀಗ ಅಮೆರಿಕ ಯೋಧರ ಕುಟುಂಬಸ್ಥರ ಮೇಲೆ ಬಿದ್ದಿದ್ದು, ಯೋಧರ ಕುಟುಂಬವನ್ನು ಸಂಪೂರ್ಣವಾಗಿ ನಾಶಗೊಳಿಸುವುದಾಗಿ ಬೆದರಿಕೆ ಕರೆಯೊಂದನ್ನು ಇಸಿಸ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಮ್ಮಲ್ಲಿ ಯೋಧರ ಕುರಿತಂತೆ ವೈಯಕ್ತಿಕ ಹಾಗೂ ಅಧಿಕೃತವಾಗಿ ಎಲ್ಲಾ ರೀತಿಯ ಮಾಹಿತಿ ದೊರಕಿದೆ. ಯೋಧರ ವೆಬ್ ಸೈಟ್ ಹ್ಯಾಕಿಂಗ್ ಮೂಲಕ ಈ ಎಲ್ಲಾ ಮಾಹಿತಿಗಳು ನಮಗೆ ಲಭ್ಯವಾಗಿದೆ. ಕೆಲವು ಮಾಹಿತಿಗಳು ಸಾರ್ವಜನಿಕ ಮಾಧ್ಯಮಗಳ ಮೂಲಕ ಪಡೆಯಲಾಗಿದ್ದು, ಆದಷ್ಟು ಬೇಗ ಈ ಎಲ್ಲಾ ವಿಳಾಸಗಳ ಮೇಲೂ ಸಂಘಟನೆ ದಾಳಿ ನಡೆಸಲಿದೆ ಎಂದು ಯೋಧರ ಕುಟುಂಬದ ವಿಳಾಸದೊಂದಿಗೆ ಪಟ್ಟಿಯೊಂದನ್ನು ಬಿಡುಗಡೆಗೊಳಿಸುವ ಮೂಲಕ ಇಸಿಸ್ ಅಮೆರಿಕ ಯೋಧರ ಕುಟುಂಬಕ್ಕೆ ಬೆದರಿಕೆಯ ಕರೆಯನ್ನು ನೀಡಿದೆ.
ಇಸಿಸ್ ಉಗ್ರರು ನೀಡಿರುವ ಬೆದರಿಕೆಯ ಕರೆಯಿಂದಾಗಿ ಅಮೆರಿಕ ಯೋಧರ ಕುಟುಂಬಸ್ಥರು ಕಂಗಾಲಾಗಿದ್ದು, ಈ ಕುರಿತಂತೆ ಅಮೆರಿಕ ಸರ್ಕಾರ ಯೋಧರ ಕುಟುಂಬಸ್ಥರಿಗೆ ರಕ್ಷಣೆಯನ್ನು ನೀಡುವ ಮೂಲಕ ಅಮೆರಿಕಾದಾದ್ಯಂತ ಎಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
Advertisement