ಕಾಪಿ ಮಾಡುವವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗುವುದಿಲ್ಲ: ಲಾಲು ಪ್ರಸಾದ್ ಯಾದವ್

ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಲುವಾಗಿ ನಕಲು ಮಾಡುವ ವಿದ್ಯಾರ್ಥಿಗಳು ಎಂದಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಂಗಳವಾರ ಹೇಳಿದ್ದಾರೆ...
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್

ಪಾಟ್ನ: ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಲುವಾಗಿ ನಕಲು ಮಾಡುವ ವಿದ್ಯಾರ್ಥಿಗಳು ಎಂದಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಂಗಳವಾರ ಹೇಳಿದ್ದಾರೆ.

ಬಿಹಾರ ರಾಜ್ಯದ ಬೋರ್ಡ್ ಎಕ್ಸಾಂನಲ್ಲಿ ವಿದ್ಯಾರ್ಥಿಗಳು ನಕಲು ಮಾಡಿ ಪರೀಕ್ಷೆ ಬರೆಯುತ್ತಿರುವುದರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಹೇಳಿಕೆಗೆ ಇಂದು ಸ್ಪಷ್ಟನೆ ನೀಡಿದ್ದು, ಕೇವಲ ಪಾಸ್ ಆಗುವ ಉದ್ದೇಶದಿಂದ ಪರೀಕ್ಷೆಯಲ್ಲಿ ನಕಲಿ ಹೊಡೆದವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಿಹಾರ ರಾಜ್ಯದ್ಯಂತ ಬೋರ್ಡ್ ಎಕ್ಸಾಂ ನಡೆಯುತ್ತಿತ್ತು. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಅವರ ಪೋಷಕರೇ ಶಾಲೆಯ ಬಹು ಮಹಡಿ ಕಟ್ಟಡವನ್ನು ಹತ್ತಿ ತಮ್ಮ ಮಕ್ಕಳಿಗೆ ಕಾಪಿ ಚೀಟಿಗಳನ್ನು ನೀಡಿ ಸಾಮೂಹಿಕ ನಕಲು ಮಾಡಲು ಸಹಾಯ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದ್ದವು. ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿತ್ತು. ವರದಿ ಕಂಡು ಎಚ್ಚೆತ್ತ ಬಿಹಾರ ಸರ್ಕಾರ ಚೀಟಿಂಗ್ ನಲ್ಲಿ ತೊಡಗಿದ್ದ ಸುಮಾರು 750 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿತ್ತು.

ಈ ಘಟನೆ ಕುರಿತಂತೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ಶಾಲೆಯ ಸಮಾರಂಭವೊಂದರಲ್ಲಿ ಮಾತನಾಡಿ, ನನ್ನ ಅಧಿಕಾರವೇನಾದರೂ ಬಿಹಾರದಲ್ಲಿ ಇದಿದ್ದರೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕದ್ದು ಮುಚ್ಚಿ ಬರೆಯುವುದೇಕೆ, ಸ್ವತಃ ನಾನೇ ಪುಸ್ತಕವನ್ನು ನೀಡುತ್ತಿದ್ದೆ. ಈ ರೀತಿ ಪರೀಕ್ಷೆಯಿಂದ ಉತ್ತೀರ್ಣರಾದರೂ ಪ್ರಯೋಜನವಿಲ್ಲ. ಇಂತಹ ಪದವಿಗಳಿಗೆ ಎಲ್ಲಿಯೂ ಬೆಲೆ ಸಿಗುವುದಿಲ್ಲ. ವಿದ್ಯಾರ್ಧಿಗಳು ಓದಿದಾಗ ಮಾತ್ರ ಪ್ರಶ್ನೆಗಳಿಗೆ ಯಾವ ಉತ್ತರ ಸರಿ ಯಾವುದು ತಪ್ಪು ಎಂದು ಉತ್ತರಿಸಲು ಸಾಧ್ಯ, ಓದಿಲ್ಲದ ವಿದ್ಯಾರ್ಥಿಗಳಿಗೆ ನಕಲಿ ಮಾಡಲು ಪುಸ್ತಕ ಕೊಟ್ಟರೂ ಸರಿಯಾದ ಉತ್ತರ ಬರೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಲಾಲು ಪ್ರಸಾದ್ ಅವರ ಈ ಹೇಳಿಕೆ ವಿವಾದಕ್ಕೆಡೆ ಮಾಡಿಕೊಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com