
ನವದೆಹಲಿ: ಭೂಸ್ವಾಧೀನ ವಿಧೇಯಕ ಇನ್ನೂ ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಬಾಕಿ ಉಳಿದಿರುವಾಗಲೇ ಇನ್ನೆರಡು ಹೊಸ ವಿಧೇಯಕಗಳಿಗೆ ಸಂಬಂಧಿಸಿ ಎಚ್ಚರಿಕೆಯ ಹೆಜ್ಜೆಯಿಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಐಎಸ್) ತಿದ್ದುಪಡಿ ವಿಧೇಯಕ ಮತ್ತು ಬಿತ್ತನೆ ಬೀಜ ವಿಧೇಯಕದ ಪರಿಶೀಲನೆಗೆಂದು ಕ್ರಮವಾಗಿ ಸಚಿವ ಅರುಣ್ ಜೇಟ್ಲಿ ಹಾಗೂ ರಾಜನಾಥ್ ಸಿಂಗ್ ನೇತೃತ್ವ ದಲ್ಲಿ ಅನೌಪಚಾರಿಕ ಸಮಿತಿಗಳನ್ನು ರಚಿಸಲಾಗಿದೆ.
ಇನ್ನಷ್ಟು ಉತ್ಪನ್ನಗಳನ್ನು ವ್ಯಾಪ್ತಿಗೆ ತರುವುದು ಮತ್ತು ಮಾನವನ ಬದುಕು, ಭದ್ರತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಪ್ರಮಾಣಪತ್ರ ಕಡ್ಡಾಯಗೊಳಿಸುವುದು ಬಿಐಎಸ್ ವಿಧೇಯಕದ ಉದ್ದೇಶ. ಆದರೆ ಇದರ ಗುಣಮಟ್ಟ ನಿರ್ಧಾರ ಪ್ರಕ್ರಿಯೆಯಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಬಿತ್ತನೆ ಬೀಜ ವಿಧೇಯಕವು ಬೀಜಗಳ ಗುಣಮಟ್ಟ ನಿಯಂತ್ರಣ ಮತ್ತು ಕಳಪೆ ಗುಣಮಟ್ಟದ ಬೀಜಗಳ ಮಾರಾಟಕ್ಕೆ ನಿರ್ಬಂಧ ಹೇರುವ ಅಂಶಗಳನ್ನು ಒಳಗೊಂಡಿದೆ. ಇಲ್ಲೂ ಬಿತ್ತನೆ ಬೀಜ ಉತ್ಪಾದನೆ ಮತ್ತು ವಿತರಣೆಯಲ್ಲಿ ಖಾಸಗಿಯವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿರುವುದು ವಿವಾದ ಸೃಷ್ಟಿಸುವ ಸಾಧ್ಯತೆಯಿದೆ.
Advertisement