
ನವದೆಹಲಿ: ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯಲ್ಲಿ ಸೋಮವಾರ ಪಾಕಿಸ್ತಾನದ ರಾಷ್ಟ್ರೀಯ ದಿನ ಆಚರಣೆ, ರಾತ್ರಿ ಅದ್ಧೂರಿ ಔತಣಕೂಟ. ಪಾಕ್ ರಾಯಭಾರ ಕಚೇರಿ ಆಯೋಜಿಸಿದ್ದ ಈ ಸಮಾರಂಭಕ್ಕೆ 7 ಮಂದಿ ಹುರಿಯತ್ ನಾಯಕರು ಮಾತ್ರವಲ್ಲದೆ ಕೇಂದ್ರ ಸಚಿವರನ್ನೂ ಆಹ್ವಾನಿಸಲಾಗಿತ್ತು.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕ್ ಆಹ್ವಾನವನ್ನು ತಿರಸ್ಕರಿಸಿದರೆ, ಕೇಂದ್ರ ಸಚಿವ ಜ.ವಿ.ಕೆ.ಸಿಂಗ್ ಅವರು ಔತಣಕೂಟದಲ್ಲಿ ಔಪಚಾರಿಕವಾಗಿ ಭಾಗವಹಿಸಿದ್ದರು. ಪಾಕ್ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರ ಆಹ್ವಾನವನ್ನು ಸ್ವೀಕರಿಸುವುದೋ, ಬೇಡವೋ ಎಂಬ ಬಗ್ಗೆ ಸಂಜೆಯವರೆಗೂ ಗೊಂದಲದಲ್ಲಿ ಬಿದ್ದ ಸರ್ಕಾರ ಕೊನೆಗೆ ವಿ.ಕೆ.ಸಿಂಗ್‍ರನ್ನು ಕಳುಹಿಸಿಕೊಡಲು ತೀರ್ಮಾನಿಸಿತು.
ಇದಕ್ಕೂ ಮೊದಲು ಹುರಿಯತ್ ನಾಯಕರ ಆಹ್ವಾನಕ್ಕೆ ಸಂಬಂಧಿಸಿ ಪಾಕ್‍ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದ ವಿದೇಶಾಂಗ ಇಲಾಖೆ ವಕ್ತಾರ ಸೈಯ್ಯದ್ ಅಕ್ಬರುದ್ದೀನ್, ಇಲ್ಲಿರುವುದು ಎರಡು ಪಕ್ಷಗಳಷ್ಟೆ. ಭಾರತ-ಪಾಕ್ ಮಾತುಕತೆಯಲ್ಲಿ ಮೂರನೆಯವರು ಹಸ್ತಕ್ಷೇಪ ಮಾಡುವುದು ಬೇಡ ಎಂದಿದ್ದರು.
ಇದೇ ವೇಳೆ, ಪಾಕಿಸ್ತಾನವು ತನ್ನ ರಾಷ್ಟ್ರೀಯ ದಿನವಾದ ಸೋಮವಾರ ಪರೇಡ್‍ನಲ್ಲಿ ಸಶಸ್ತ್ರ ಪಡೆಗಳ ಶಕ್ತಿಯನ್ನು ಜಗಜ್ಜಾಹೀರು ಮಾಡಿತು. ಅಣ್ವಾಸ್ತ್ರ ಕ್ಷಿಪಣಿಗಳು, ಸಮರ ವಿಮಾನಗಳು ಸೇರಿ ಪಾಕ್ ಸೇನೆಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಮೂಲಕ ತಾಲಿಬಾನ್‍ಗೆ ಬಿಸಿಮುಟ್ಟಿಸಿತು. ಭಾರತ ವಿರೋಧಿಸಿಲ್ಲ: ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಆಹ್ವಾನ ನೀಡಿರುವುದನ್ನು ಭಾರತ ಸರ್ಕಾರ ವಿರೋಧಿಸಿಲ್ಲ ಎಂದು ಪಾಕ್ ಹೈ ಕಮಿಷನರ್ ಅಬ್ದುಲ್ ಬಾಸಿತ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಭಾರತ ಮತ್ತು ಪಾಕಿಸ್ತಾನದ ಮಾತುಕತೆಯು ಇನ್ನಷ್ಟು ಗಂಭೀರ ಮತ್ತು ಪ್ರಾಮಾಣಿಕವಾಗಿ ಮುಂದುವರಿಯಲಿದೆ ಎಂದೂ ಹೇಳಿದ್ದಾರೆ.
ಪ್ರತ್ಯೇಕತಾವಾದಿಗಳ ಜತೆಗಿನ ಚರ್ಚೆಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ನನಗೆ ಗೊತ್ತು. ಆದರೆ ಸುಖಾಸುಮ್ಮನೆ ವಿವಾದ ಸೃಷ್ಟಿಸಬೇಡಿ ಎಂದು ನಾನು ಮಾಧ್ಯಮ ಮಿತ್ರರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಬಾಸಿತ್.
ಶರಿಯಾ ಜಾರಿಗೆ ಉಗ್ರ ಹೋರಾಟ
ಭಯೋತ್ಪಾದನಾ ಕೃತ್ಯಗಳನ್ನು ನಡೆಸಿ ರಕ್ತದೋಕುಳಿ ಹರಿಸಿದ್ದಾಯ್ತು. ಈಗ ಇವನಿಗೆ ಶರಿಯಾ ಕಾನೂನು ಬೇಕಂತೆ! ಪಾಕ್‍ನ ಉಗ್ರ ಸಂಘಟನೆ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಸೋಮವಾರ `ಹೊಸ ಚಳವಳಿ' ನಡೆಸುವುದಾಗಿ ಘೋಷಿಸಿದ್ದಾನೆ. ಪಾಕಿಸ್ತಾನದ ಜನರಲ್ಲಿ ಒಗ್ಗಟ್ಟು ಮೂಡುವಂತೆ ಮಾಡಿ, ದೇಶಾದ್ಯಂತ ಶರಿಯಾ ಕಾನೂನು ಜಾರಿ ಮಾಡುವುದಾಗಿಯೂ ಹೇಳಿದ್ದಾನೆ. ಜೆಯುಡಿ ಸದಸ್ಯರು ದೇಶದ ಮೂಲೆ ಮೂಲೆಗೂ ತೆರಳಿ ಒಗ್ಗಟ್ಟಿನ ಸಂದೇಶ ಸಾರಲಿದ್ದಾರೆ. ಜತೆಗೆ ಎಲ್ಲರೂ ಜೆಯುಡಿ ಜತೆ ಕೈಜೋಡಿಸುವಂತೆ ಕೋರಲಿದ್ದಾರೆ.
ಉಗ್ರ-ಮುಕ್ತ ವಾತಾವರಣದಲ್ಲಿ ಮಾತುಕತೆ
ಭಯೋತ್ಪಾದನೆ ಮತ್ತು ಹಿಂಸೆ ಮುಕ್ತ ವಾತಾವರಣದಲ್ಲಿ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಎಲ್ಲ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ನಾನು ಪಾಕ್‍ಗೆ ಶುಭಾಶಯ ಕೋರಿದ್ದೇನೆ. ಜತೆಗೆ, ಉಗ್ರ ಮುಕ್ತ ವಾತಾವರಣದಲ್ಲಿ ಎಲ್ಲ ವಿವಾದ ಪರಿಹರಿಸಲು ನಾವು ಬದ್ಧವಾಗಿರುವುದಾಗಿಯೂ ತಿಳಿಸಿದ್ದೇನೆ ಎಂದಿದ್ದಾರೆ. ವಿಶೇಷಾಧಿಕಾರ ಕಾಯ್ದೆ ಕ್ರಮೇಣ ವಾಪಸ್ ಅಧಿಕಾರಕ್ಕೇರಿದಂದಿನಿಂದಲೂ ಮಿತ್ರಪಕ್ಷ ಬಿಜೆಪಿಗೆ ಮುಜುಗರ ಉಂಟು ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಈಗ ಹೊಸ ವಿವಾದ ಸೃಷ್ಟಿಸಿದ್ದಾರೆ. ವಿವಾದಿತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎಎಫ್ಎಸ್ ಪಿಎ)ಯನ್ನು ರಾಜ್ಯದಿಂದ ಕ್ರಮೇಣವಾಗಿ ವಾಪಸ್ ಪಡೆಯುತ್ತೇವೆ ಎಂದು ಸಯೀದ್ ಹೇಳಿದ್ದಾರೆ.
ರಾಜ್ಯದ ಸುಧಾರಿಸುತ್ತಿರುವ ಭದ್ರತಾ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡು ನಿಧಾನವಾಗಿ ಕಾಯ್ದೆ ಹಿಂತೆಗೆದುಕೊಳ್ಳಲಾಗುತ್ತದೆ. ಸೇನೆ ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದೇ ಈ ವಿಚಾರದಲ್ಲಿ ಮುಂದುವರಿಯುತ್ತೇವೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ತಮ್ಮ ಹಿಂದಿನ ಹೇಳಿಕೆಯಿಂದ ಯೂ ಟರ್ನ್ ಪಡೆದ ಸಯೀದ್, ಈಗ ರಾಜ್ಯದಲ್ಲಿ ನಡೆದ ಶಾಂತಿಯುತ ಚುನಾವಣೆಗೆ ಜನತೆ ಹಾಗೂ ಚುನಾವಣಾ ಆಯೋಗ ಕಾರಣ ಎಂದು ಹೇಳಿದ್ದಾರೆ.
Advertisement