
ಭೋಪಾಲ್: ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕಾತಿ ಹಾಗೂ ವ್ಯಾಪಂ ( ವ್ಯವಸಾಯಿಕ ಪರೀಕ್ಷಾ ಮಂಡಳಿ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಯಾದವ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಲಕ್ನೋದಲ್ಲಿ ತಮ್ಮ ಕುಟುಂಬಸ್ಥರ ಮನೆಯೊಂದರಲ್ಲಿ ನೆಲೆಸಿದ್ದ ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಯಾದವ್ ಅವರ ಮೃತ ದೇಹ ಮನೆಯ ರೂಮ್ ನಲ್ಲಿ ದೊರೆತಿದೆ. ಮೂಲಗಳ ಪ್ರಕಾರ ಶೈಲೇಶ್ ಯಾದವ್ ಅವರು ಮಿದುಳು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತಂತೆ ಇನ್ನೂ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶ ರಾಜ್ಯದ ವೃತ್ತಿಪರ ಶಿಕ್ಷಣ ಮಂಡಳಿಯಲ್ಲಿನ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಅಲ್ಲಿನ ರಾಜ್ಯಪಾಲ ರಾಮ್ ನರೇಶ್ ಯಾದವ್ ಹಾಗೂ ಅವರ ಪುತ್ರ ಶೈಲೇಶ್ ಯಾದವ್ ಅವರ ವಿರುದ್ಧ ವಿಶೇಷ ತನಿಖಾ ತಂಡದ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿದ್ದರು.
ರಾಜ್ಯಪಾಲ ಯಾದವ್ ಅವರ ಮಗ ಶೈಲೇಶ್ 10 ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ಹೇಳಿ ಲಂಚ ಪಡೆದು ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಹಗರಣದಲ್ಲಿ ಶೈಲೇಶ್ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
Advertisement