
ಗುವಾಹಟಿ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಗಗನಸಖಿಯ ವೀಡಿಯೋ ತೆಗೆಯಲು ಯತ್ನಿಸಿದ್ದಾರೆ. ಇದನ್ನು ನೋಡಿದ ಮಹಿಳೆಯೊಬ್ಬಳು ಈ ವ್ಯಕ್ತಿಗಳ ಫೋಟೋವನ್ನು ಕ್ಲಿಕ್ ಮಾಡಿದ್ದಾಳೆ. ಇಷ್ಟೇ ಅಲ್ಲ ಈ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ವಿಮಾನದಲ್ಲಿನ ಕಿತಾಪತಿಗಳನ್ನು ಬಹಿರಂಗಪಡಿಸಿದ್ದಾಳೆ.
ದೆಹಲಿ-ಗುವಾಹತಿ ಇಂಪಾಲ್ ಇಂಡಿಗೋ ವಿಮಾನ (6 ಇ 221)ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ ವಿಮಾನಸಂಸ್ಥೆ ವಿಮಾನದಲ್ಲಿ ಕಿತಾಪತಿ ಮಾಡಿದ ಇಬ್ಬರು ಪ್ರಯಾಣಿಕರ ಬಗ್ಗೆ ತನಿಖೆ ಆರಂಭಿಸಿದೆ.
ಮಂಗಳವಾರ ಬೆಳಗ್ಗೆ 5.30ಕ್ಕೆ ವಿಮಾನ ದೆಹಲಿಯಿಂದ ಟೇಕ್ ಆಫ್ ಆದ ಕೂಡಲೇ ಇಬ್ಬರು ವ್ಯಕ್ತಿಗಳು ಗಗನಸಖಿ ವಿಡಿಯೋ ಮಾಡಲು ತೊಡಗಿದ್ದಾರೆ. ಆಗಲೇ ಅವರಿಗೆ ಎಚ್ಚರಿಕೆ ನೀಡಿ ವೀಡಿಯೋ ಡಿಲೀಟ್ ಮಾಡುವಂತೆ ಹೇಳಲಾಯಿತು. ಇದಾದ ನಂತರವೂ ಇವರು ಕಾಯಕ ಮುಂದುವರಿಸಿದ್ದಾರೆ.
ಇದನ್ನು ನೋಡಿದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ದ ರಾಷ್ಟ್ರೀಯ ಕಾರ್ಯದರ್ಶಿ ಆ್ಯಂಜಲಿಕಾ ಅರಿಬಮ್ ಗಗನಸಖಿಯ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗಳ ಫೋಟೋ ಕ್ಲಿಕ್ಕಿಸಿದ್ದಾಳೆ. ಈ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಆ ವ್ಯಕ್ತಿಗಳ ಕುಚೇಷ್ಟೆ ಬಯಲಿಗೆಳೆದಿದ್ದಾಳೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅರಿಬಮ್ ಹೇಳಿದ್ದು ಹೀಗೆ: ವಿಮಾನದಲ್ಲಿ ಅವರು ಗಗನಸಖಿಯ ಫೋಟೋ ತೆಗೆಯುವುದನ್ನು ನೋಡಿ ನಾನು ದಂಗಾದೆ. ಹೀಗೆ ಮಾಡಬೇಡಿ ಎಂದು ನಾನು ಬುದ್ಧಿ ಮಾತು ಹೇಳಿದಾಗ, ಅದರಲ್ಲಿ ಒಬ್ಬ ವ್ಯಕ್ತಿ, ನಾನು ನಿಮ್ಮನ್ನೇನೂ ಮುಟ್ಟಿಲ್ಲವಲ್ಲಾ..ನೀವು ಸುಮ್ನಿರಿ ಅಂದಿದ್ದಾನೆ.
ಇಷ್ಟೇ ಅಲ್ಲ, ನನ್ನ ಸಹೋದರಿ ಮಗುವಿಗೆ ಹಾಲುಣಿಸುವಾಗಲೂ ಇವರಿಬ್ಬರು ಫೋಟೋ ತೆಗೆಯಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗಲೂ, ನೀನು ಅದೇನು ಮಾಡ್ತಿಯೋ ಮಾಡು ಎಂದು ಉಢಾಪೆಯ ಉತ್ತರ ನೀಡಿದ್ದಾರೆ. ಆವಾಗ ನಾನು ಅವರ ಫೋಟೋ ಕ್ಲಿಕ್ ಮಾಡ ತೊಡಗಿದೆ. ಅಷ್ಟರಲ್ಲಿ ಅವರು ಸುಮ್ಮನಾದರು.
ಗುವಾಹಟಿಯಲ್ಲಿ ವಿಮಾನ ಇಳಿದಾಗ ಈ ಇಬ್ಬರು ವ್ಯಕ್ತಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಮಾನ ಸಂಸ್ಥೆ ಈ ವ್ಯಕ್ತಿಗಳಿಗಾಗಿ ಈಗ ಹುಡುಕಾಟ ನಡೆಸುತ್ತಿದೆ.
Advertisement