ಪ್ರಧಾನಿ ನರೇಂದ್ರ ಮೋದಿಗೆ ಸಚಿವರ ಫೀಡ್‍ಬ್ಯಾಕ್

ಕೇಂದ್ರ ಸಂಪುಟ ಪುನಾರಚನೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮಂಗಳವಾರ ಸ್ವತಂತ್ರ ಖಾತೆಯನ್ನು ನಿಭಾಯಿಸುತ್ತಿರುವ ಕೇಂದ್ರದ ಎಲ್ಲ ಸಹಾಯಕ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸಂಪುಟ ಪುನಾರಚನೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮಂಗಳವಾರ ಸ್ವತಂತ್ರ ಖಾತೆಯನ್ನು ನಿಭಾಯಿಸುತ್ತಿರುವ ಕೇಂದ್ರದ ಎಲ್ಲ ಸಹಾಯಕ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
    
ತಾವು ಈವರೆಗೆ ಮಾಡಿದ ಕೆಲಸಗಳೇನು ಮತ್ತು ಮುಂದಿನ ಯೋಜನೆಗಳೇನು ಎಂಬೆಲ್ಲ ಮಾಹಿತಿಗಳನ್ನು ಸಚಿವರು ಪ್ರಧಾನಿಯ ಮುಂದಿಟ್ಟಿದ್ದಾರೆ. ಸಂಪುಟ ಪುನಾರಚನೆ ವೇಳೆ `ಕೆಲಸ ಮಾಡದ ಸಚಿವರಿಗೆ' ಕೊಕ್ ನೀಡಲಾಗುತ್ತದೆ ಎಂಬ ವಿಚಾರ ಬಹಿರಂಗವಾದೊಡನೆ ಈ ಬೆಳವಣಿಗೆ ನಡೆದಿರುವುದು ವಿಶೇಷ. ಸಾಧನೆಗಳ ವರದಿ: ಬೆಳಗ್ಗೆ ನವದೆಹಲಿಯ 7 ರೇಸ್ ಕೋರ್ಸ್ ರಸ್ತೆಗೆ ಆಗಮಿಸಿದ 13 ಸಹಾಯಕ ಸಚಿವರು ಪ್ರಧಾನಿ ಕರೆದ ಸಭೆಯಲ್ಲಿ ಪಾಲ್ಗೊಂಡರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೂ ಭಾಗವಹಿಸಿದ್ದರು. ಪ್ರತಿಯೊಬ್ಬ ಸಚಿವರೂ ತಮ್ಮ ತಮ್ಮ ಸಾಧನೆಯ ವರದಿಯನ್ನು ಒಪ್ಪಿಸಿ, ಅದರ ಬಗ್ಗೆ ವಿವರಿಸುವಂತೆ ಹಾಗೂ ಭವಿಷ್ಯದ ಯೋಜನೆಗಳ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಅದರಂತೆ, ಎಲ್ಲರೂ ಆಯಾ ಸಚಿವಾಲಯದ ಸಾಧನೆಯ ವಿವರ ನೀಡಿದರು. 2 ಗಂಟೆ ಕಾಲ ನಡೆದ ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಸಚಿವಾಲಯಗಳು ಮತ್ತು ಸಚಿವರಿಗಿರುವ ಸಮಸ್ಯೆಗಳನ್ನೂ ಆಲಿಸಿದರು. ಜತೆಗೆ ತನ್ನೊಂದಿಗೆ ಸಂಪರ್ಕದಲ್ಲಿರುವಂತೆಯೂ ಸೂಚಿಸಿದರು.ಅಲ್ಲದೆ, ಪ್ರತಿಯೊಬ್ಬ ಸಚಿವರೂ ತಮ್ಮ ಕೆಲಸಕಾರ್ಯಗಳ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಬೇಕು ಎಂದೂ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಬಿಜೆಪಿ ಮತ್ತು ಕಾರ್ಯಕರ್ತರ ನಡುವಿನ ಅಂತರ ಹೆಚ್ಚಾಗುತ್ತಿರುವ ಬಗ್ಗೆ ಆರೆಸ್ಸೆಸ್ ಎಚ್ಚರಿಕೆ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಇಂತಹ ಚರ್ಚೆ ನಡೆಯುತ್ತಿರಲಿ: ಪಾರದರ್ಶಕ ರೀತಿಯಲ್ಲಿ ಕೆಲಸ ಮಾಡುವಂತೆ ಹಾಗೂ ಸಾರ್ವಜನಿಕ ಹಿತ ಕಾಪಾಡುವಂತಹ ನೀತಿ ಜಾರಿ ಮಾಡುವಂತೆಯೂ ಮೋದಿ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರೊಬ್ಬರು, ಇದೊಂದು ಉತ್ತಮ ಸಭೆ. ಇಂತಹ ಚರ್ಚೆಗಳು ಆಗಾಗ್ಗೆ ನಡೆಯುತ್ತಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ರೈಲ್ವೆ ಸಚಿವಾಲಯಕ್ಕೆ ತರಾಟೆ: ರೈಲುಗಳ ಸಂಚಾರವು ವಿಳಂಬವಾಗುತ್ತಿರುವ ಬಗ್ಗೆ ಸರಣಿ ದೂರುಗಳು ಪ್ರಧಾನಿ ಕಾರ್ಯಾಲಯದ ಕದ ತಟ್ಟಿದೆ.

ಇದರಿಂದ ತೀವ್ರ ಆಕ್ರೋಶಗೊಂಡಿರುವ ಪಿಎಂಒ ಈ ಬಗ್ಗೆ ರೈಲ್ವೆ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ. ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಮಾಡುವಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ವಿಫಲರಾಗಿರುವುದು ಪ್ರಧಾನಿ ಮೋದಿಗೆ ತೀವ್ರ ಅಸಮಾಧಾನ ಮೂಡಿಸಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಪಿಎಂಒಗೆ ಬಂದಿರುವ ಎಲ್ಲ ದೂರುಗಳನ್ನೂ ರೈಲ್ವೆ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ. ಜತೆಗೆ, ಸುರೇಶ್ ಪ್ರಭು ಅವರಿಗೆ ಕರೆ ಮಾಡಿರುವ ಪಿಎಂಒ, ತುರ್ತು ಪರಿಸ್ಥಿತಿಯ ವೇಳೆ ಹೇಗೆ ರೈಲುಗಳನ್ನು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿದ್ದವೋ, ಅದೇ ಮಾದರಿಯನ್ನು ಅನುಸರಿಸಿ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com