
ನವದೆಹಲಿ: ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ವಾರ ಹೊಸ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದೇಶ ಮತ್ತು ವಿದೇಶದಲ್ಲಿ ತೆರಿಗೆ ತಪ್ಪಿಸಿ ಹಣ ಇಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನನ್ನು ಬಲಪಡಿಸುವ ನಿರ್ಧಾರವನ್ನು ಬಜೆಟ್ ನಲ್ಲಿ ಘೋಷಿಸಿತ್ತು. ಅದರಂತೆ ಈಗ ವಿದೇಶಗಳಲ್ಲಿರುವ ಬಹಿರಂಗಪಡಿಸದ ಆದಾಯ ಮತ್ತು ಸಂಪತ್ತುಗಳ ವಿಧೇಯಕ- 2015 ಅನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ನಿರ್ಧರಿಸಿದೆ.
ಜಾರಿ ನಿರ್ದೇಶನಾಲಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೇಟ್ಲಿ, ವಿದೇಶದಲ್ಲಿ ತೆರಿಗೆ ತಪ್ಪಿಸಿ ಇಟ್ಟಿರುವ ಹಣ ವಾಪಸ್ ತರಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಕಪ್ಪುಹಣಕ್ಕೆ ಸಂಬಂಧಿಸಿ ಸರ್ಕಾರ ಈಗಾಗಲೇ 121 ಮಂದಿ ವಿರುದ್ಧ ವಿಚಾರಣೆ ಆರಂಭಿಸಿದೆ.
ಅಂತಾರಾಷ್ಟ್ರೀಯ ಸಮುದಾಯವು ಮಾಹಿತಿಯ ಸ್ವಯಂಚಾಲಿತ ವರ್ಗಾವಣೆ ವ್ಯವಸ್ಥೆಯನ್ನು 2017ರಲ್ಲಿ ಜಾರಿಗೆ ತರಲಿದೆ. ಹೀಗಾಗಿ ಇನ್ನು ಮುಂದೆ ವಿದೇಶದಲ್ಲಿ ತೆರಿಗೆ ತಪ್ಪಿಸಿ ಹಣ ಇಡುವುದು ಸಾಧ್ಯವಿಲ್ಲ ಎಂದೂ ಜೇಟ್ಲಿ ಇದೇ ವೇಳೆ ಎಚ್ಚರಿಸಿದರು.
ವಿದೇಶದಲ್ಲಿ ಕಪ್ಪುಹಣ ಇಟ್ಟ ಅನೇಕ ಪ್ರಕರಣಗಳಿವೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ತನಿಖೆ ನಿಧಾನವಾಗುತ್ತಿದೆ. ಈಗಾಗಲೇ ಹಲವು ಪ್ರಕರಣಗಳ ತೆರಿಗೆ ನಿರ್ಧಾರ ಪ್ರಕ್ರಿಯೆ ಮುಗಿದಿದೆ. 121 ಮಂದಿ ವಿರುದ್ಧ ತೆರಿಗೆ ಇಲಾಖೆಯು ವಿಚಾರಣೆ ಆರಂಭಿಸಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು.
Advertisement