ಸಾವನ್ನು ಗೆದ್ದ ಹಸುಳೆಗೆ ಭುಪೆಂದರ್ ಎಂದು ಹೆಸರಿಟ್ಟರು!

ಈ ಪುಟ್ಟ ಪಾಪುವಿನ ಹೆಸರು ಭುಪೆಂದರ್ ಅರ್ಥಾತ್ ಭೂಮಿಯ ರಾಜ. ನೇಪಾಳದ ಭೂಕಂಪ ಎಲ್ಲರ ಜೀವ ಕಿತ್ತುಕೊಂಡಾಗ 5 ದಿನಗಳ...
11 ದಿನದ ಪಾಪು ಭುಪೆಂದರ್
11 ದಿನದ ಪಾಪು ಭುಪೆಂದರ್

ಕಾಠ್ಮಂಡು: ಈ ಪುಟ್ಟ ಪಾಪುವಿನ ಹೆಸರು ಭುಪೆಂದರ್ ಅರ್ಥಾತ್ ಭೂಮಿಯ ರಾಜ. ನೇಪಾಳದ ಭೂಕಂಪ ಎಲ್ಲರ ಜೀವ ಕಿತ್ತುಕೊಂಡಾಗ 5 ದಿನಗಳ ಪಾಪು ಅದೃಷ್ಟದಿಂದ ಪಾರಾಗಿತ್ತು. ಕೆಲ ದಿಗಳ ಹಿಂದೆಯಷ್ಟೇ ನೇಪಾಳವನ್ನು ನಡುಗಿಸಿದ ಭೂಕಂಪಕ್ಕೆ ಕಟ್ಟಡ, ಮನೆಗಳು ಧರೆಗುರುಳಿದಾಗ ಏನೂ ತಿಳಿಯದ ಈ ಹಸುಳೆ ತೊಟ್ಟಿಲಲ್ಲಿ ನಿದ್ದೆ ಮಾಡುತ್ತಿತ್ತು. ಭೂಮಿ ಕಂಪಿಸಿದಾಗ ತೊಟ್ಟಿಲು ಮೇಲೆ ಕೆಳಗಾಯಿತು. ಅಲ್ಲಿಂದ ಪಾಪುವನ್ನು ಎದೆಗವುಚಿ ತಾತ ತೆಂಕ್ ಬಹದ್ದೂರ್ ಓಡಿ ಕಟ್ಟಡದ ಮೆಟ್ಟಿಲು ಕೆಳಗೆ  ಅವಿತು ಕುಳಿತ. 5 ಗಂಟೆಯ ನಂತರ ತಾತ ಮತ್ತು ಪಾಪುವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಆಮೇಲೆ ಒಂದು ವಾರಗಳ ಕಾಲ ಸಂತ್ರಸ್ತರ ಹಲವು ಶಿಬಿರಗಳಲ್ಲಿ, ದಾರಿ ಬದಿಯಲ್ಲಿ ತಲೆ ಮೇಲೆ ಸೂರು ಇಲ್ಲದೆ ಆ ಚಳಿಯನ್ನು ಸಹಿಸಿಕೊಂಡು ಬದುಕಿದ 11 ದಿನದ ಪಾಪು ಈಗ ಸಂತ್ರಸ್ತರ ಶಿಬಿರದಲ್ಲಿ ಹೀರೋ ಆಗಿದೆ.
ಪ್ರಕೃತಿಯ ವಿಕೋಪಕ್ಕೊಳಗಾದ ಭೂಮಿಯಲ್ಲಿ ಎಲ್ಲವನ್ನೂ ಸಹಿಸಿ ಬದುಕಿದ ಈ ಪಾಪುವನ್ನು ನೋಡಲು ಹಲವಾರು ಮಂದಿ ಶಿಬಿರಕ್ಕೆ ಭೇಟಿ ನೀಡುತ್ತಿದ್ದಾರೆ.

ನಿನ್ನೆ ಸಂತ್ರಸ್ತರ ಶಿಬಿರದಲ್ಲಿ ಪಾಪುವಿನ ನಾಮಕರಣ ಕಾರ್ಯಕ್ರಮವೂ ನಡೆದಿದೆ. ಭೂಮಿ ಕಂಪಿಸಿದ ನಾಡಿನಲ್ಲಿ ಸಾವನ್ನು ಗೆದ್ದು ಬಂದ ಪಾಪುವಿಗೆ ಅವರಿಟ್ಟ ಹೆಸರು ಭುಪೆಂದರ್. ಮಂತ್ರೋಚ್ಛಾರಣೆಯ ಮೂಲಕ ನೇಪಾಳಿ ಸಂಪ್ರದಾಯದಂತೆ ಪುರೋಹಿತರು ಕಪ್ಪು ತಿಲಕವಿಟ್ಟು, ಕೈಗೆ ಕಪ್ಪು ಮತ್ತು ಕೆಂಪು ದಾರ ಕಟ್ಟಿ ಕಿವಿಯಲ್ಲಿ ಭುಪೆಂದರ್ ಕಾರ್ಕಿ ಎಂದು ಹೇಳುವ ಮೂಲಕ ನಾಮಕರಣ ಶಾಸ್ತ್ರ ಮುಗಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com