
ಕಠ್ಮಂಡು/ನವದೆಹಲಿ: ಭೂಕಂಪದಿಂದ ಜರ್ಝರಿತ ನೇಪಾಳ ದಲ್ಲಿ ನೆರವಿನ ಹೆಸರಲ್ಲಿ ಪಾಕಿಸ್ತಾನ ಮತ್ತು ಚೀನಾ ನಡೆಸುತ್ತಿರುವ `ಪರಿಹಾರ' ರಾಜಕಾರಣದ ಬಣ್ಣ ಬಯಲಾಗಿದೆ.
ಪಾಕಿಸ್ತಾನದ ಬೀಫ್ ಮಸಾಲಾ ಹಾಗೂ `ಹಾಜರಿಗುಂಟು ಕೆಲಸಕ್ಕಿಲ್ಲ'ವೆನ್ನುವ ಚೀನಾ ಸೈನಿಕರ ನೀತಿ ಕುರಿತು ನೇಪಾಳಿಗರಲ್ಲೇ ಆಕ್ರೋಶ ಭುಗಿಲೆದ್ದಿದೆ.
ಭಾರತದ ಪರಿಹಾರ ಕಾರ್ಯಾಚರಣೆಗೆ ಸಮಾಧಾನರಾಗಿರುವ ಜನ, ಪಾಕ್, ಚೀನಾ ವರ್ತನೆಗೆ ಬೇಸತ್ತು, ನಿಮ್ಮ ಉಸಾಬರಿ ಬೇಡ ಎನ್ನುತ್ತಿದ್ದಾರೆ.
ಮುಖ ಉಳಿಸಿಕೊಳ್ಳೋ ತಂತ್ರ
ಭೂಕಂಪಪೀಡಿತ ಹಿಂದೂ ರಾಷ್ಟ್ರಕ್ಕೆ ಗೋಮಾಂಸದ ಆಹಾರ ಪ್ಯಾಕೆಟ್ ಕಳುಹಿಸಿ ಭಾರಿ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಈಗ ಮುಖ ಉಳಿಸಿಕೊಳ್ಳುವ ತಂತ್ರಕ್ಕೆ ಮೊರೆಹೋಗಿದೆ. ಆರಂಭದಲ್ಲಿ `ಬೀಫ್ ಮಸಾಲಾ' ಪ್ಯಾಕೆಟ್ ನೇಪಾಳಕ್ಕೆ ಪೂರೈಕೆಯಾಗಲು ವಾಯುಸೇನೆಯೇ ಕಾರಣ. ಇದರಲ್ಲಿ ಸರ್ಕಾರದ ತಪ್ಪೇನೂ ಇಲ್ಲ ಎಂದು ಹೇಳಿಕೊಂಡಿತ್ತು.
ಆದರೆ ನಂತರ ತನ್ನ ಹೇಳಿಕೆ ಬದಲಿಸಿದ ಪಾಕ್, ಪೊಟ್ಟಣದೊಳಗೇನಿದೆ ಎನ್ನುವುದು ಇಂಗ್ಲಿಷ್ ಮತ್ತು ಉರ್ದುವಿನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಹಾಗಾಗಿ ಆ ಆಹಾರ ತಿನ್ನುವುದು, ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ ಎಂಬ ಸ್ಪಷ್ಟನೆ ನೀಡಿದೆ. ಈ ನಡುವೆ ನೇಪಾಳದ ಅಧಿಕಾರಿಗಳು ಕೂಡ ಪಾಕಿಸ್ತಾನಕ್ಕೆ ಆ ರೀತಿಯ ಆಹಾರಪೊಟ್ಟಣಗಳನ್ನು ಮತ್ತೆ ಕಳುಹಿಸಿಕೊಡದಂತೆ ಸೂಚ್ಯವಾಗಿ ತಿಳಿಸಿದ್ದಾರೆ.
Advertisement