

ನವದೆಹಲಿ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು, ನನ್ನ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸೋಮವಾರ ಹೇಳಿದ್ದಾರೆ.
ಅಕ್ರಮ ಸಂಬಂಧದ ಬಗ್ಗೆ ಇಂದು ಸ್ಪಷ್ಟನೆ ನೀಡಿದ ಕುಮಾರ್ ವಿಶ್ವಾಸ್, ಮಹಿಳೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಅನಗತ್ಯವಾಗಿ ಮಹಿಳೆಯ ಹೆಸರಿನೊಂದಿಗೆ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ. ಇದರ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ವ್ಯವಸ್ಥಿತ ಷಡ್ಯಂತ್ರ ರೂಪಿಸಿವೆ ಎಂದು ಆರೋಪಿಸಿದರು. ಅಲ್ಲದೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಆಪ್ ನಾಯಕ, ಮಾಧ್ಯಮಗಳ ಕಚೇರಿಗಳು ಭ್ರಷ್ಟಾಚಾರದ ಕೇಂದ್ರಗಳಾಗಿವೆ. ಇದರಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಮಹಿಳಾ ಆಯೋಗದ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್ ವಿಶ್ವಾಸ್, ನನಗೆ ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ನಂತರ ಅದಕ್ಕೆ ಉತ್ತರಿಸುವುದಾಗಿ ಹೇಳಿದರು.
ತಮ್ಮೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಮಾಧ್ಯಮ ಸುದ್ದಿಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿದೇ ಮೌನ ವಹಿಸಿದ್ದ ಕುಮಾರ್ ವಿಶ್ವಾಸ್ ವಿರುದ್ದ ಆಪ್ ಕಾರ್ಯಕರ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಮಹಿಳಾ ಆಯೋಗ ಕುಮಾರ್ ವಿಶ್ವಾಸ್ ಅವರಿಗೆ ನೋಟಿಸ್ ಸಹ ನೀಡಿದೆ.
Advertisement