2002ರ ಹಿಟ್ ಆಂಡ್ ರನ್ ಪ್ರಕರಣ: ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ

2002ರ ಹಿಟ್ ಆಂಟ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: 2002ರ ಹಿಟ್ ಆಂಟ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.

ಸುದೀರ್ಘ 12 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ಬೆಳಗ್ಗೆ 11.15ಕ್ಕೆ ತೀರ್ಪು ಪ್ರಕಟಿಸಿದ ಜಡ್ಜ್ ಡಿ.ವಿ.ದೇಶಾಪಂಡೆ ಅವರು, ಸಲ್ಮಾನ್ ವಿರುದ್ಧದ ಉದ್ದೇಶರಹಿತ ಮಾನವ ಹತ್ಯೆ ಆರೋಪ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ ಆರೋಪ, ಕುಡಿದು ವಾಹನ ಚಾಲನೆ, ಅತಿ ವೇಗ, ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪಗಳು ಸಾಬೀತಾಗಿದ್ದು, ಬಾಲಿವುಡ್ ನಟ ತಪ್ಪಿತಸ್ಥ ಎಂದು ತೀರ್ಪು ನೀಡಿದರು.

ವಾದ-ವಿವಾದದ ಬಳಿಕ ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಮೂರ್ತಿ ದೇಶಪಾಂಡೆ ಅವರು, ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದರು.

ತೀರ್ಪು ಪ್ರಕಟವಾಗುತ್ತಿದ್ದಂತೆ ಪೊಲೀಸರು ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದಿದ್ದು, ಕೋರ್ಟ್ ನಿಂದ ನೇರವಾಗಿ ಮುಂಬೈನ ಆರ್ಥರ್ ರಸ್ತೆ ಜೈಲಿಗೆ ಕರೆದೊಯ್ಯಲಿದ್ದಾರೆ.

2002, ಸೆಪ್ಟೆಂಬರ್ 28ರಂದು ಮದ್ಯಪಾನ ಸೇವಿಸಿ ಕಾರು ಚಲಾಯಿಸುತ್ತಿದ್ದ ಸಲ್ಮಾನ್ ಖಾನ್, ತನ್ನ ಕಾರನ್ನು ಮುಂಬೈ ಉಪನಗರದ ಬಾಂದ್ರಾದ ಬೇಕರಿಯೊಂದಕ್ಕೆ ನುಗ್ಗಿಸಿದ ಕಾರಣ ಫುಟ್‌ಪಾತ್‌ನಲ್ಲಿ ಮಲಗಿದ್ದ ಐವರಲ್ಲಿ ಒಬ್ಬ ಸಾವಿಗೀಡಾಗಿದ್ದ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮೇಲೆ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಲಾಗಿತ್ತು.

ಹಲವು ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ 12 ವರ್ಷ ಹಳೆಯ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪಿನ ವಿರುದ್ಧ ಸಲ್ಲು ಮೇಲ್ಮನವಿ ಹಾಗೂ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ತೀರ್ಪು ಹಿನ್ನೆಲೆಯಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ಸುತ್ತಲೂ ಬಿಗಿಭದ್ರತೆ ಏರ್ಪಡಿಸಲಾಗಿದೆ. ಕೇವಲ ವಕೀಲರು, ಮಾಧ್ಯಮದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com