
ಗ್ಯಾಂಗ್‍ಟಕ್: ಚಿಕ್ಕ ಮಕ್ಕಳ ಕೈಗೆ ಅಪಾಯ ಕಾರಿ ವಸ್ತುಗಳು ಸಿಗದಂತೆ ಇಡಲು ಇದೊಂದು ಎಚ್ಚರಿಕೆ ಗಂಟೆ. ಗ್ಯಾಂಗ್‍ಟಕ್‍ನಲ್ಲಿ ಹತ್ತು ತಿಂಗಳ ಹಸುಳೆಯೊಂದು ಅನಾಮತ್ತು 29 ಸ್ಟೇಪ್ಲರ್ ಪಿನ್ ತಿಂದು ನರಕದರ್ಶನ ಮಾಡಿ ವೈದ್ಯರ ಸಮಯೋಚಿತ ಚಿಕಿತ್ಸೆಯಿಂದಾಗಿ ಪುನರ್ಜನ್ಮ
ಪಡೆದು ಮನೆಗೆ ವಾಪಸ್ಸಾಗಿದೆ.
ಆದದ್ದಿಷ್ಟು, ಮನೆಯಲ್ಲಿ ಬಿದ್ದಿದ್ದ ಸ್ಟೇಪ್ಲರ್ ಪಿನ್‍ಗಳನ್ನು ಮಗು ಬಾಯಿಗೆ ತುರುಕಿಕೊಂಡಿದೆ. ಆದರೆ ಮಗುವಿಗೆ ಅವುಗಳನ್ನು ನುಂಗಲು ಆಗಿಲ್ಲ. ಹೀಗಾಗಿ ಅವೆಲ್ಲಾ ಗಂಟಲಿನ ಮೇಲ್ಭಾಗದಲ್ಲೇ ಸಿಕ್ಕಿಹಾಕಿಕೊಂಡಿವೆ. ಯಾತನೆ ಅನುಭವಿ ಸುತ್ತಿದ್ದ ಮಗುವಿನ ಬಾಯಿಯಿಂದ ಪಿನ್‍ಗಳನ್ನು ಹೊರತೆಗೆಯಲು ಇನ್ನಿಲ್ಲದ ಸಾಹಸ ಮಾಡಿ ಸೋತ ಪೋಷಕರು, ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಕೈಗಿತ್ತಿದ್ದಾರೆ.
ಇಎನ್‍ಟಿ ಸ್ಪೆಷಲಿಸ್ಟ್ ಪ್ರೋಫೆಸರ್ ಸುವಮೋಯ್ ಚಕ್ರವರ್ತಿ ತಮ್ಮ ನಾಲ್ವರು ವೈದ್ಯರ ತಂಡದೊಂದಿಗೆ ಮಗುವಿನ ಗಂಟಲಿನಿಂದ ಒಟ್ಟು 29 ಪಿನ್‍ಗಳನ್ನು ಹೊರತೆಗೆದು ಪ್ರಾಣ
ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗ್ಳೂರಲ್ಲಿ ಮಾಸಿಕ 15 ಪ್ರಕರಣ!
ಬೆಂಗಳೂರು- ಮಹಾನಗರ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಪುಟ್ಟ ಮಕ್ಕಳು ಪಿನ್, ನಾಣ್ಯ, ಗುಂಡುಸೂಜಿ ನುಂಗುವ ಉದಾಹರಣೆ ಸಾಕಷ್ಟು ಸಿಗುತ್ತದೆ. ನಗರದ ಪ್ರಮುಖರೆನಿಸಿಕೊಂಡ ಮಕ್ಕಳ ತಜ್ಞರ ಬಳಿ ಮಾಸಿಕ ಸರಾಸರಿ ಎಂದರೂ 12ರಿಂದ 15 ಇಂತಹ ಪ್ರಕರಣಗಳು ಬರುತ್ತವೆ!
ಇಂತಹ ಒಂದು ಮಾಹಿತಿ ನೀಡಿದ್ದು ಕೊಲಂಬಿಯ ಏಷಿಯಾದ (ಯಶವಂತಪುರ) ಮಕ್ಕಳ ತಜ್ಞ ಡಾ.ಸಾಯಿ ಪ್ರಸಾದ್. ನಾಣ್ಯ, ಹೇರ್ ಪಿನ್, ಸಣ್ಣ ಬ್ಯಾಟರಿಯನ್ನು ನುಂಗುವ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ. ತಿಂದಂಥ ವಸ್ತುಗಳು ಅನ್ನ ನಾಳದಲ್ಲೇ ಸಿಕ್ಕಿಕೊಂಡರೆ ಅಪಾಯ ಹೆಚ್ಚು. ಇಂತಹ ಪ್ರಕರಣಗಳು ನಿರಂತರವಾಗಿ ಬರುತ್ತಿರುತ್ತವೆ. ಇತ್ತೀಚೆಗೆ ಕುಣಿಗಲ್‍ನ ಒಂದು ವರ್ಷದ ಮಗು ಕಡ್ಲೆಬೀಜ ನುಂಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ತಕ್ಷಣವೇ ಶಸ್ತ್ರ ಚಿಕಿತ್ಸೆ
ಮಾಡಿ ಮಗುವನ್ನು ರಕ್ಷಿಸಲಾಯಿತು. ಅದೇ ರೀತಿ ಏಳು ವರ್ಷದ ಮಗು ಬೆಳ್ಳುಳ್ಳಿ ನುಂಗಿತ್ತು, ಸಂಕಷ್ಟ ಸ್ಥಿತಿ ನಿರ್ಮಾಣವಾಗಿತ್ತು. ಎಂಡೋಸ್ಕೋಪಿ ಮೂಲಕ ನೋಡಿ, ಅದನ್ನು ಹೊರತೆಗೆದು ಮಗುವನ್ನು ರಕ್ಷಿಸಲಾಯಿತು. ಸಾಕಷ್ಟು ಪ್ರಕರಣಗಳಲ್ಲಿ ಮಕ್ಕಳು ನುಂಗಿದ್ದು ಹೊಟ್ಟೆಯೊಳಗೆ ಇಳಿದುಬಿಡುತ್ತದೆ. ಹೀಗೆ ನುಂಗಿದ ವಸ್ತು ಇಳಿದರೆ ಹೆಚ್ಚಿನ ತೊಂದರೆ ಆಗುವುದಿಲ್ಲ. ನಾಳದಲ್ಲಿ ಸಿಕ್ಕಿಕೊಂಡರೆ ಮಾತ್ರ ಅಪಾಯ ಎಂದರು. ಇನ್ನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಡಾ.ಸುದರ್ಶನ ಬಲ್ಲಾಳ, ಮಕ್ಕಳು ಮಾತ್ರೆ, ಇತರೆ ಲೋಹ ವಸ್ತು ನುಂಗುವ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬರುತ್ತವೆ. ನಮ್ಮ ಆಸ್ಪತ್ರೆಗೆ ಮಾಸಿಕ 2-3 ಪ್ರಕರಣಗಳು ಬರುತ್ತವೆ ಎಂದು ಹೇಳಿದರು.
ಮಕ್ಕಳಿಂದ ದೂರ ಇಡಬೇಕಾದ ವಸ್ತುಗಳು
ನಾಣ್ಯ, ನಟ್, ಬೋಲ್ಟ್, ಚಮಚ, ಚಾಕು, ಗೋಲಿ, ಬಳಪ, ಮಾತ್ರೆಗಳು, ಗಾಜಿನ ಸೀಸೆಗಳು, ಸ್ಟೇಪ್ಲರ್‍ಪಿನ್, ಬೆಂಕಿಪೊಟ್ಟಣ, ಬಿಸಿ ವಸ್ತುಗಳು, ವಿದ್ಯುತ್ ಪ್ಲಗ್ ಪಾಯಿಂಟ್‍ಗಳು ಇತ್ಯಾದಿ.
Advertisement