ಸೇನಾ ಹೆಲಿಕಾಪ್ಟರ್ ಪತನ: ಪಿಎಂ ನವಾಜ್ ಷರೀಫ್‌ ಗುರಿಯಾಗಿಸಿ ಈ ದಾಳಿ: ತಾಲಿಬಾನಿ ಹೇಳಿಕೆ

ವಿವಿಧ ದೇಶದ ರಾಯಭಾರಿಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡಿದ್ದು, ಈ ಹೆಲಿಕಾಪ್ಟರನ್ನು ಹೊಡೆದುರುಳಿಸಿದ್ದು...
ಹೆಲಿಕಾಪ್ಟರ್ ಪತನ
ಹೆಲಿಕಾಪ್ಟರ್ ಪತನ

ಇಸ್ಲಾಮಾಬಾದ್‌: ವಿವಿಧ ದೇಶದ ರಾಯಭಾರಿಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡಿದ್ದು, ಈ ಹೆಲಿಕಾಪ್ಟರನ್ನು ಹೊಡೆದುರುಳಿಸಿದ್ದು ನಾವೇ ಎಂದು ತಾಲಿಬಾನಿ ಉಗ್ರ ಸಂಘಟನೆ ಹೇಳಿದ್ದು, ಪ್ರಧಾನಿ ನವಾಜ್ ಷರೀಫರನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಿರುವುದಾಗಿ ಒಪ್ಪಿಕೊಂಡಿವೆ.

ಮಿಸೈಲ್ ದಾಳಿ ಮೂಲಕ ನಾವೇ ಈ ಹೆಲಿಕಾಪ್ಟರ್ ಅನ್ನು ಹೊಡೆದು ಉರುಳಿಸಿರುವುದಾಗಿ ತಾಲಿಬಾನ್ ಹೊಣೆ ಹೊತ್ತುಕೊಂಡಿದೆ.

ಕಾರ್ಯಕ್ರಮ ನಿಮಿತ್ತ ಹಲವು ದೇಶದ ರಾಯಭಾರಿಗಳನ್ನು ಕರೆ ತರುತ್ತಿದ್ದ ಸೇನಾ ಹೆಲಿಕಾಪ್ಟರ್ ಉತ್ತರ ಪಾಕಿಸ್ತಾನದ ಗಿಲ್‌ಗಿಟ್‌ - ಬಾಲ್ಟಿಸ್ಥಾನ್‌ ಪ್ರಾಂತ್ಯದಲ್ಲಿ ಪತನಗೊಂಡು ಫಿಲಿಫೀನ್ಸ್ ಮತ್ತು ನಾರ್ವೆಯ ರಾಯಭಾರಿಗಳ ಸಹಿತ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಒಟ್ಟು 11 ಮಂದಿ ವಿದೇಶೀಯರಿದ್ದು, ನಾರ್ವೆ ರಾಯಭಾರಿ ಲೀಫ್ ಎಚ್‌ ಲಾರ್ಸನ್‌, ಫಿಲಿಪ್ಪೀನ್ಸ್‌ ರಾಯಭಾರಿ ಡೊಮಿಂಗೋ ಡಿ ಲೂಸೆನಾರಿಯೋ ಜೂನಿಯರ್‌ ಹಾಗೂ ಮಲೇಶ್ಯ ಮತ್ತು ಇಂಡೋನೇಶ್ಯ ರಾಯಭಾರಿಗಳ ಪತ್ನಿಯರು ಹಾಗೂ ಹೆಲಿಕಾಪ್ಟರ್‌ನ ಇಬ್ಬರು ಸೇನಾ ಪೈಲಟ್‌ಗಳು ಕೂಡ ವಿಧಿವಶರಾಗಿದ್ದಾರೆ,

ನಾಲ್ತಾರ್‌ ಕಣಿವೆಯಲ್ಲಿ ಶಾಲಾ ಕಟ್ಟಡವೊಂದರ ಮೇಲೆ ಹೆಲಿಕಾಪ್ಟರ್ ಪತನಗೊಂಡಿದೆ. ಪೋಲಂಡ್‌ ಮತ್ತು ಡೆನ್ಮಾರ್ಕ್‌ನ ರಾಯಭಾರಿಗಳು ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರ ಮೇಜರ್‌ ಜನರಲ್‌ ಸಲೀಂ ಬಾಜ್ವಾ ತಿಳಿಸಿದ್ದಾರೆ.

ಮೂರು ಎಂಐ-17 ಹೆಲಿಕಾಪ್ಟರ್‌ಗಳು ಗಿಲ್‌ಗಿಟ್‌ - ಬಾಲ್ಟಿಸ್ಥಾನದಲ್ಲಿ ಪಾಕ್‌ ಪ್ರಧಾನಿ ನವಾಜ್‌ ಶರೀಫ್ ಅವರು ಭಾಷಣ ಮಾಡಲಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಹಲವಾರು ರಾಜತಾಂತ್ರಿಕರನ್ನು ಒಯ್ಯುತ್ತಿದ್ದವು. ಈ ಪೈಕಿ ಎರಡು ಹೆಲಿಕಾಪ್ಟರ್‌ಗಳು ಸುರಕ್ಷಿತ ಅವತರಣಗೈದರೆ ಮೂರನೇ ಹೆಲಿಕಾಪ್ಟರ್‌ ಬೆಂಕಿಗೆ ಆಹುತಿಯಾಗಿ ಪತನಗೊಂಡಿತು ಎಂದು ಬಾಜ್ವಾ ತಿಳಿಸಿದ್ದಾರೆ.

ಪಾಕ್‌ ಪ್ರಧಾನಿ ನವಾಜ್‌ ಶರೀಫ್ ಅವರು ತಮ್ಮ ನಿಗದಿತ ವೇಳಾಪಟ್ಟಿಯಂತೆ ಎರಡು ಯೋಜನೆಗಳ ಉದ್ಘಾಟನೆಗಾಗಿ ವಿಮಾನದಲ್ಲಿ ಹೊರಟಿದ್ದರಾದರೂ ಆ ಬಳಿಕ ಅವರ ವಿಮಾನವನ್ನು ಮರಳಿ ಇಸ್ಲಾಮಾಬಾದ್‌ಗೆ ತಿರುಗಿಸಲಾಗಿ ಅದು ಅಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಮೂಲಗಳು ತಿಳಿಸಿವೆ.

ದಾಳಿ ಹೊಣೆ ಹೊತ್ತ ತಾಲಿಬಾನ್ ಉಗ್ರ ಸಂಘಟನೆ
ಮಿಸೈಲ್ ದಾಳಿ ಮೂಲಕ ನಾವೇ ಈ ಹೆಲಿಕಾಪ್ಟರ್ ಅನ್ನು ಹೊಡೆದು ಉರುಳಿಸಿರುವುದಾಗಿ ತಾಲಿಬಾನ್ ಹೊಣೆ ಹೊತ್ತು ಪ್ರಕಟಣೆ ಹೊರಡಿಸಿದೆ. ಆದರೆ ಈ ಬಗ್ಗೆ ಪಾಕ್ ಮಿಲಿಟರಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಘಟನೆ ನಡೆದ ಕೂಡಲೇ ಹೊಣೆ ಹೊತ್ತುಕೊಂಡಿರುವುದು ಗಮನಿಸಿದರೆ ಇದು ಸತ್ಯಕ್ಕೆ ದೂರವಾದದ್ದು ಎಂದು ವರದಿಯೊಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com