
ನವದೆಹಲಿ: ಸರ್ಕಾರಕ್ಕೆ ಸಂಬಂಧಿಸಿದ ಮುದ್ರಣ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿಗಳ ಫೋಟೋ ಮಾತ್ರ ಬಳಸಬೇಕು. ಮುಖ್ಯಮಂತ್ರಿ ಸೇರಿದಂತೆ ಇತರೆ ಯಾವುದೇ ರಾಜಕಾರಣಿಗಳ ಫೋಟೊವನ್ನು ಬಳಸುವಂತಿಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯನ್ಯಾಯಮೂರ್ತಿ ಫೋಟೋ ಬಳಸಲು ಅನುಮತಿ ನೀಡಿರುವ ಕೋರ್ಟ್, ಆ ಜಾಹೀರಾತುಗಳಲ್ಲಿ ತಮ್ಮ ಫೋಟೋ ಇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಈ ಮೂವರ ಪೂರ್ವಾನುಮತಿ ಅಗತ್ಯ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ರಾಜಕಾರಣಿಗಳು ತೆರಿಗೆದಾರರ ಹಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಜಾಹೀರಾತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರಿ ಜಾಹೀರಾತು ಪ್ರಕಟಣೆಗೆ ಕಠಿಣ ನಿಯಮ ವಿಧಿಸಬೇಕು ಎಂದು ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ಇಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ ರಾಜ್ಯ ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಗಳಾಗಲಿ, ಗವರ್ನರ್, ಯಾವುದೇ ರಾಜ್ಯ ಸಚಿವರ ಪೋಟೊ ಬಳಸುವಂತಿಲ್ಲ. ಅದೇ ರೀತಿ ಕೇಂದ್ರದ ಜಾಹೀರಾತುಗಳಲ್ಲಿ ಪ್ರಧಾನಿ ಹೊರತುಪಡಿಸಿ, ಕೇಂದ್ರ ಸಚಿವರ ಫೋಟೊ ಬಳಸುವಂತಿಲ್ಲ. ಅಲ್ಲದೇ ಜಾಹೀರಾತು ಸಂಬಂಧಿ ಹೊಸ ಮಾರ್ಗಸೂಚಿ ಉಲ್ಲಂಘಿಸದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಸಮಿತಿಯನ್ನು ನೇಮಕ ಮಾಡಿದೆ.
Advertisement