
ಕಾಬುಲ್: ಅಫ್ಘಾನಿಸ್ಥಾನದ ರಾಜಧಾನಿಯ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ನಾಲ್ವರು ಭಾರತೀಯರೂ ಸೇರಿದಂತೆ ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.
ಈ ದಾಳಿಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಹಾಗೂ 9 ಮಂದಿ ವಿದೇಶಿಗರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಮೂರರಿಂದ ನಾಲ್ವರು ಶಂಕಿತ ತಾಲಿಬಾನ್ ಉಗ್ರ ಸಂಘಟನೆಗೆ ಸೇರಿದ ಬಂಧೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು, ಇಂದು ಉಗ್ರರ ವಿರುದ್ಧ ಆಫ್ಘಾನ್ ಪೊಲೀಸರು ನಡೆಸಿದ ಏಳು ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಬಂಧೂಕುದಾರಿಗಳು ಪಾರ್ಕ್ ಪ್ಯಾಲೇಸ್ ಹೋಟೆಲ್ಲಿನ ಮೇಲೆ ಗುಂಡಿನ ದಾಳಿ ನಡೆಸಿದ ಎಂದು ಕಾಬುಲ್ ಪೊಲೀಸ್ ಮುಖ್ಯ ಕಾರ್ಯದರ್ಶು ಅಬ್ದುಲ್ ರೆಹಮಾನ್ ರಹೀಮಿ ತಿಳಿಸಿದ್ದರು.
ಇದೇ ವೇಳೆಗೆ ಎರಡು ಸ್ಫೋಟಗಳು ಸಂಭವಿಸಿದ್ದು ಕೇಳಿ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾಗಿ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವು ಅತಿಥಿಗೃಹದಲ್ಲಿದ್ದ ಸುಮಾರು ೨೦ ಜನರನ್ನು ರಕ್ಷಿಸಿದರು ಎಂದು ತಿಳಿದು ಬಂದಿದೆ. ಪೊಲೀಸ್ ಮತ್ತು ಭಯೋತ್ಪಾದಕನ ನಡುವಿನ ಕಾಳಗ ಗುರುವಾರ ಬೆಳೆಗ್ಗೆ ಅಂತ್ಯವಾಗಿದೆ ಎಂದು ಕೂಡ ತಿಳಿದುಬಂದಿದೆ.
ಈ ದಾಳಿಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊಣೆ ಹೊತ್ತಿಲ್ಲ. ಆದರೆ ಈ ಹಿಂದೆ ತಾಲಿಬಾನ್ ಸಂಘಟನೆ ಇತರ ಅತಿಥಿಗೃಹಗಳ ಮೇಲೆ ದಾಳಿ ನಡೆಸಿತ್ತು.
Advertisement