ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಮೊದಲ ವರ್ಷದ ಆಚರಣೆಯನ್ನು ಅದ್ದೂರಿಯಾಗಿ ಸೆಲಬ್ರೇಟ್ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.
ದೇಶಾದ್ಯಂತ 250 ರ್ಯಾಲಿ ಹಾಗೂ 500 ಪತ್ರಿಕಾ ಗೋಷ್ಠಿ ನಡೆಸಲು ಬಿಜೆಪಿ ತಯಾರಿ ನಡೆಸುತ್ತಿದೆ.
ಪ್ರತಿ ಎರಡು ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ ರ್ಯಾಲಿ ಏರ್ಪಡಿಸಲಾಗುತ್ತದೆ. ಅದರಲ್ಲಿ ಒಂದೇ ಒಂದು ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ, ಆದರೆ ಯಾವ ಸ್ಥಳದಲ್ಲಿ ನಡೆಯುವ ರ್ಯಾಲಿಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೇ 26 2014 ರಲ್ಲಿ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರದ ಗದ್ದುಗೆ ಏರಿತು. ಮೋದಿ ಸರ್ಕಾರದ ಒಂದು ವರ್ಷದ ಸಾಧನೆ, ಹಮ್ಮಿಕೊಂಡಿರುವ ಯೋಜನೆಗಳ ಅಂಕಿ ಅಂಶ ಸಿದ್ದವಾಗಿದ್ದು, ಪುಸ್ತಕ ರೂಪದಲ್ಲಿ ಹೊರ ತರಲು ತಯಾರಿ ನಡೆಸಿದ್ದು, ನರೇಂದ್ರ ಮೋದಿ ಅಂಕಿತ ಬೀಳಬೇಕಷ್ಟೆ. ಕೇಂದ್ರ ಸಚಿವರಾದ ಅನಂತ ಕುಮಾರ್, ಪ್ರಕಾಶ್ ಜಾವ್ಡೇಕರ್, ಅರುಣ್ ಜೈಟ್ಲಿ, ಸರ್ಕಾರದ ಕಾರ್ಯಕ್ರಮಗಳ ಪಟ್ಟಿ ತಯಾರು ಮಾಡುವ ಸಮಿತಿಯಲ್ಲಿದ್ದಾರೆ.
ಮೇ 9 ರಂದು ಪ್ರಧಾನಿ ಭಿಮಾ ಸುರಕ್ಷಾ ಯೋಜನೆ, ಪಿಎಂ ಜೀವನ್ ಭಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಈ ಎಲ್ಲಾ ಕಾರ್ಯಕ್ರಮಗಳ ವಿವರವನ್ನೊಳಗೊಂಡ ಬುಕ್ ಲೆಟ್ ಇಲ್ಲವೇ ಇ-ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ.
Advertisement