ಇತಿಹಾಸಕಾರರೇ.. ಇತಿಹಾಸ ಪುಸ್ತಕವನ್ನು ಸರಿಪಡಿಸಿ: ರಾಜನಾಥ್ ಸಿಂಗ್

ಇತಿಹಾಸ ಪುಸ್ತಕಗಳಲ್ಲಿ ಮಹಾರಾಣ ಪ್ರತಾಪ್ ಅವರ ಸಾಧನೆಯನ್ನು ಬಣ್ಣಿಸಬೇಕಿದ್ದು, ಇತಿಹಾಸಕಾರರು ಇತಿಹಾಸಕ್ಕೆ ಮರಳಿ ಹೋಗಿ ಪರಿಶೀಲನೆ ನಡೆಸಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ...
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಜೈಪುರ: ಇತಿಹಾಸ ಪುಸ್ತಕಗಳಲ್ಲಿ ಮಹಾರಾಣ ಪ್ರತಾಪ್ ಅವರ ಸಾಧನೆಯನ್ನು ಬಣ್ಣಿಸಬೇಕಿದ್ದು, ಇತಿಹಾಸಕಾರರು ಇತಿಹಾಸಕ್ಕೆ ಮರಳಿ ಹೋಗಿ ಪರಿಶೀಲನೆ ನಡೆಸಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.

ಪ್ರತಾಪ್ ಘರ್ ಜಿಲ್ಲೆಯಲ್ಲಿ ಮಹಾರಾಣ ಪ್ರತಾಪ್ ಅವರ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಇತಿಹಾಸ ಪುಸ್ತಕದಲ್ಲಿ ಮಹಾರಾಣ ಪ್ರತಾಪ್ ಅವರ ಸಾಧನೆ ಹಾಗೂ ತ್ಯಾಗವನ್ನು ಪರಿಪೂರ್ಣವಾಗಿ ಬಿಂಬಿಸಿಲ್ಲ. ಅಕ್ಬರ್ ಸಾಧನೆಗೆ ಹೆಚ್ಚು ಮಹತ್ವಕೊಟ್ಟು ಮಹಾನ್ ವ್ಯಕ್ತಿ ಎಂದು ಹಾಡಿಹೊಗಳಿರುವ ಇತಿಹಾಸಕಾರರು ಮಹಾರಾಣ ಪ್ರತಾಪ್  ಅವರನ್ನೇಕೆ ಮಹಾನ್ ವ್ಯಕ್ತಿ ಎಂದು ಬಣ್ಣಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ರಾಜಸ್ತಾನ ಸರ್ಕಾರ ಶಾಲಾ ಸಿಬಿಎಸ್ ಸಿ ಪಠ್ಯಕ್ರಮದಲ್ಲಿ ಮಹಾರಾಣ ಪ್ರತಾಪ್ ಚರಿತ್ರೆ ಸೇರ್ಪಡೆ  ನಿರ್ಧಾರದ ಕುರಿತಂತೆ ಮಾತನಾಡಿರುವ ಅವರು, ರಾಜಸ್ತಾನ ಸರ್ಕಾರ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ತಾಯಿನಾಡಿಗಾಗಿ ಹೋರಾಟ ಮಾಡಿ ಮಹಾನ್ ವ್ಯಕ್ತಿಯಾಗಿರುವ ಮಹಾರಾಣ ಪ್ರತಾಪ್ ರಾಷ್ಟ್ರದ ನಾಯಕರಾಗಿದ್ದು, ಅವರ 475ನೇ ಜನ್ಮ ದಿನ ಆಚರಣೆ ಕುರಿತಂತೆ ಕೇಂದ್ರ ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ. ಮಹಾರಾಣ ಪ್ರತಾಪ್ ಕುರಿತಂತೆ ಇತಿಹಾಸಕಾರರು ಹೆಚ್ಚು ಕಾರ್ಯಪ್ರವೃತ್ತರಾಗಬೇಕಿದ್ದು, ಇತಿಹಾಸ ಪುಸ್ತಕಗಳನ್ನು ಸರಿಪಡಿಸಬೇಕಿದೆ. ಅಕ್ಬರ್ ಅವರನ್ನು ಇತಿಹಾಸದಲ್ಲಿ ಹೊಗಳಿರುವುದರ ಕುರಿತಂತೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಅಕ್ಬರ್ ಅಷ್ಟೇ ಮಹಾರಾಣ ಪ್ರತಾಪ್ ಕೂಡ ಸಾಧನೆ ಮಾಡಿದ್ದಾರೆ. ಅಕ್ಬರ್ ಮಹಾನ್ ವ್ಯಕ್ತಿ ಎಂದಾದರೆ ಮಹಾರಾಣ ಪ್ರತಾಪ್ ಅವರನ್ನೇಕೆ ಮಹಾನ್ ವ್ಯಕ್ತಿ ಎಂದು ಬಣ್ಣಿಸಬಾರದು ಅವರು ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com