
ನವದೆಹಲಿ: ಲಂಚದ ಆಮಿಷವೊಡ್ಡಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ವಿರುದ್ಧ ಮಾಜಿ ಮುಖ್ಯಕಾರ್ಯದರ್ಶಿ ಒಮೇಶ್ ಸೈಗಲ್ ದೂರು ದಾಖಲಿಸಿದ್ದಾರೆ.
ಮೇ.17 ರಂದು ಆಟೋ ರಿಕ್ಷಾ ಚಾಲಕರೊಂದಿಗೆ ಸಾರ್ವಜನಿಕ ಸಭೆ ನಡೆಸಿದ್ದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ನೀಡಿದ್ದ ಹೇಳಿಕೆ ಆಧರಿಸಿ ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿರುವ ಒಮೇಶ್ ಸೈಗಲ್, ಕೇಜ್ರಿವಾಲ್ ಹೇಳಿಕೆ ನಿಖರತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಯ ಮಗಳು ಎಂಬುದನ್ನು ಬಹಿರಂಗಪಡಿಸದೇ ಹರ್ಷಿತ ಕೇಜ್ರಿವಾಲ್ ಚಾಲನಾ ಪರವಾನಗಿ ಪಡೆಯಲು ಆರ್.ಟಿ.ಒ ಅಧಿಕಾರಿಗೆ ಲಂಚದ ಆಮಿಷವೊಡ್ಡಿದ್ದರು ಆದರೆ ಲಂಚ ಸ್ವೀಕರಿಸಲು ಅಧಿಕಾರಿ ನಿರಾಕರಿಸಿದ್ದರು. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಬಂದ ನಂತರ ಶೇ.70 -80 ರಷ್ಟು ಭ್ರಷ್ಟಾಚಾರ ಕಡಿಮೆಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ವಿವಾದಕ್ಕೀಡಾಗಿತ್ತು.
ಕೇಜ್ರಿವಾಲ್ ಅವರ ಈ ಹೇಳಿಕೆ ಆಧರಿಸಿ, ಭಗತ್ ಸಿಂಗ್ ಕ್ರಾಂತಿ ಸೇನಾ ಅಧ್ಯಕ್ಷರೂ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಕೇಜ್ರಿವಾಲ್ ಪುತ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ಡಾರೆ. ದೂರಿನ ಜೊತೆಯಲ್ಲಿ ಕೇಜ್ರಿವಾಲ್ ಹೇಳಿಕೆ ಇರುವ ಸಿ.ಡಿಯನ್ನು ಆಯುಕ್ತರಿಗೆ ಕಳಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 12 ರ ಪ್ರಕಾರ ಯಾವುದೇ ರೀತಿಯ ಅಪರಾಧಕ್ಕೆ ಪ್ರಚೋದನೆ ನೀಡುವುದೂ ಸಹ ಅಪರಾಧವಾಗಲಿದೆ. ಪ್ರಚೋದನೆಯಿಂದ ಅಪರಾಧ ಕೃತ್ಯ ನಡೆಯದೇ ಇದ್ದರೂ ಸಹ ಅಪರಾಧವೆಸಗಲು ಪ್ರಚೋದನೆ ನೀಡಿದವರಿಗೆ ಶಿಕ್ಷೆಯಾಗಬೇಕಿದೆ. ಆದ್ದರಿಂದ ಲಂಚದ ಆಮಿಷವೊಡ್ಡಿದ್ದ ಕೇಜ್ರಿವಾಲ್ ಪುತ್ರಿಗೂ ಶಿಕ್ಷೆಯಾಗಬೇಕಿದೆ ಎಂದು ಮಾಜಿ ಮುಖ್ಯಕಾರ್ಯದರ್ಶಿ ಒಮೇಶ್ ಸೈಗಲ್ ಅಭಿಪ್ರಾಯಪಟ್ಟಿದ್ದಾರೆ.
Advertisement