
ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ಸಮರ ತಾರಕಕ್ಕೇರಿದೆ. ಆದರೆ ಬಲಿಪಶು ಆಗಿರುವುದು ಮಾತ್ರ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿ!
ಸೋಮವಾರ ನಡೆದ ಅತ್ಯಂತ ಮುಜುಗರಕಾರಿ ಸನ್ನಿವೇಶವೊಂದರಲ್ಲಿ, ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಂದೋ ಮಜುಂದಾರ್ ಎಂದಿನಂತೆ ದೆಹಲಿಯ ತಮ್ಮ ಸೆಕ್ರೆಟರಿಯಟ್ ಕಟ್ಟಡದ ಏಳನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ಹೋದರೆ, ತಮ್ಮ ಕೊಠಡಿಗೆ ಬೀಗ ಜಡಿದಿರುವುದನ್ನು ಕಂಡು ದಂಗಾಗಿದ್ದಾರೆ.
ಕೊಠಡಿಗೆ ಮಾತ್ರವಲ್ಲದೆ ಅವರ ಸುಪರ್ದಿಯ ಇಡೀ ಕಚೇರಿಗೇ ಬೀಗ ಹಾಕಲಾಗಿತ್ತು. ಘಟನೆಯ ಹಿನ್ನೆಲೆ: ದೆಹಲಿ ಸರ್ಕಾರದ ಒಪ್ಪಿಗೆ ಪಡೆಯದೆ ಐಎಎಸ್ ಅಧಿಕಾರಿ ಶಕುಂತಲಾ ಗಾಮ್ಲಿನ್ ಅವರನ್ನು ಪ್ರಭಾರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಜೀಬ್ ಜಂಗ್ ನೇಮಕ ಮಾಡಿದ್ದು ವಿವಾದವಾಗಿತ್ತು. ಕೇಜ್ರಿವಾಲ್ ಇದನ್ನು ಕಟುವಾಗಿ ವಿರೋಧಿಸಿ, ನೇಮಕವನ್ನು ಪ್ರಶ್ನಿಸಿದ್ದರು.
ನಜೀಬ್ ಜಂಗ್ ಕಳಿಸಿದ್ದ ನೇಮಕಾತಿ ಆದೇಶಕ್ಕೆ ಮಜುಂದಾರ್ ಸಹಿ ಹಾಕಿದ್ದು ಕೇಜ್ರಿವಾಲ್ ಕೆಂಗಣ್ಣಿಗೆ ಕಾರಣವಾಗಿತ್ತು. ಶನಿವಾರದಂದು ಮಜುಂದಾರ್‍ರನ್ನು ಕೇಜ್ರಿವಾಲ್ ಏಕಾಏಕಿ ಹುದ್ದೆಯಿಂದ ತೆಗೆದುಹಾಕಿ ಆದೇಶ ಹೊರಡಿಸಿದ್ದಲ್ಲದೆ ಅವರ ಸ್ಥಾನಕ್ಕೆ ರಾಜೇಂದ್ರ ಕುಮಾರ್‍ರನ್ನು ನೇಮಿಸಿದ್ದರು. ಆದರೆ ಸೋಮವಾರ ಜಂಗ್ ಕೇಜ್ರಿವಾಲ್ ಸರ್ಕಾರದ ಆದೇಶ ತಿರಸ್ಕರಿಸಿದ್ದಾರೆ.
Advertisement