
ನವದೆಹಲಿ: ಅಧಿಕಾರಕ್ಕೆ ಬಂದ ದಿನದಿಂದ ವಿದೇಶ ಪ್ರವಾಸದಲ್ಲೇ ಮೋದಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಮೋದಿಗೆ ದೇಶವಾಸಿಗಳಿಗಿಂತ ಅನಿವಾಸಿ ಭಾರತೀಯರ ಮೇಲೆ ಮೋದಿಗೆ ಒಲವು ಹೆಚ್ಚು ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿಗೆ ದೇಶದಲ್ಲಿ ವಾಸಿಸುವವರಿಗಿಂತ ವಿದೇಶದಲ್ಲಿ ಇರುವವರ ಮೇಲೆ ಹೆಚ್ಚಿನ ವ್ಯಾಮೋಹ ಎಂದು ದೂರಿದ್ದಾರೆ. ಯಾವಾಗಲು ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿರುವ ಮೋದಿಗೆ ದೇಶದ ರೈತರ ಸಮಸ್ಯೆ ಕೇಳುವಷ್ಟು ವ್ಯವಧಾನವಿಲ್ಲ ಎಂದು ಸಿಬಲ್ ಆಪಾದಿಸಿದ್ದಾರೆ.
ದೇಶದ ಶೇ. 52 ರಷ್ಟು ರೈತರು ಸರಾಸರಿ 47 ಸಾವಿರ ರೂಪಾಯಿ ಸಾಲ ಮಾಡಿದ್ದಾರೆ. ಅದರಲ್ಲಿ ಖಾಸಗಿ ಲೇವಾದೇವಿದಾರರಿಂದಲೇ 26 ಸಾವಿರ ರೂಪಾಯಿ ಸಾಲ ಪಡೆದಿರುತ್ತಾರೆ. ಸಣ್ಣ ಹಿಡುವಳಿದಾರರ ಬಗ್ಗೆ ಕಿಂಚಿತ್ತೂ ಗಮನ ಹರಿಸದ ಪ್ರಧಾನಿ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಕಿಡಿಕಾರಿದರು.
ಈ ಹಿಂದೆ ಭಾರತೀಯನಾಗಿ ಹುಟ್ಟಿದ್ದಕ್ಕೆ ಮುಜುಗರ ಪಡುವಂತಾಯಿತು ಎಂದು ಜರಿಯುತ್ತಿದ್ದ ಮೋದಿ ಶಾಂಘೈನಲ್ಲಿ ಭಾರತೀಯ ಸಮುದಾಯದವರ ಜೊತೆ ನಡೆದ ಸಭೆಯಲ್ಲಿ ಭಾರತೀಯನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಹೇಳಿರುವುದರ ಬಗ್ಗೆ ಆಸಹನೆ ವ್ಯಕ್ತ ಪಡಿಸಿದರು.
Advertisement