
ಲಂಡನ್: ಒಟ್ಟು 400 ಸಾವುಗಳಿಗೆ ಸಂಚು ರೂಪಿಸಿದ ವ್ಯಕ್ತಿ, ಕಳೆದ ತಿಂಗಳು ಕೀನ್ಯಾ ಯೂನಿವರ್ಸಿಟಿಯಲ್ಲಿ ನಡೆದ 148 ಮಂದಿಯ ನರಮೇಧದ ರೂವಾರಿ ಒಬ್ಬ ಮಹಿಳೆ ಎಂದರೆ
ನಂಬಲು ಸಾಧ್ಯವೇ? ನಂಬಲೇಬೇಕು.
ವೈಟ್ ವಿಡೋ ಎಂದೇ ಕರೆಸಿಕೊಂಡಿರುವ ಆ ಮಹಿಳೆಯ ಹೆಸರು ಸಮಂತಾ ಲ್ಯೂಥ್‍ವೇಟ್. ಇದೀಗ ಇಂಟರ್‍ಪೋಲ್ ಈಕೆಯ ಹುಡುಕಾಟಕ್ಕಾಗಿ 200 ದೇಶಗಳ ಭದ್ರತಾ ಕಚೇರಿಗಳಿಗೆ ಸಂದೇಶ ರವಾನಿಸಿದೆ. ಈಕೆಯ ಮೇಲಿರುವ ಆರೋಪ ಒಂದೆರಡಲ್ಲ. ಆಕೆ ಇಸಿಸ್ ಉಗ್ರ ಸಂಘಟನೆಯ ಸಕ್ರಿಯ ಕಾರ್ಯಕರ್ತೆಯಾಗಿದ್ದಾಳೆ.
ನಾಲ್ಕು ಮಕ್ಕಳ ತಾಯಿ ಸಮಂತಾ (32) ಲಂಡನ್ ಯುನಿವರ್ಸಿಟಿ ಪದವೀಧರೆ ಎಂಬುದು ಇವಳ ಹೆಗ್ಗಳಿಕೆಯಾದರೆ, ಲಂಡನ್ 7/7ರ ಕೃತ್ಯದಲ್ಲಿ ಭಾಗಿಯಾಗಿದ್ದ ಆತ್ಮಾಹುತಿ ದಳದ
ಉಗ್ರ ಜರ್ಮೈನ್ ಲಿಂಡ್ಸೇ ಪತ್ನಿ ಎಂಬುದು ಈಕೆಗಿರುವ ಕುಖ್ಯಾತಿ.
ಸದ್ಯದಲ್ಲಿ ಈಕೆ ಬ್ರಿಟನ್ ನಿಂದ ಪಲಾಯನ ಮಾಡಿದ್ದು, ವೇಷ ಮರೆಸಿಕೊಂಡು ಕುಕೃತ್ಯ ಮುಂದುವರೆಸಿದ್ದಾಳೆ ಎನ್ನಲಾಗಿದೆ. ಆಫ್ರೀಕಾದ ಅಲ್ ಕೈದಾ ಗುಂಪಿನ ಶಾಖೆಗಳಲ್ಲೊಂದಾದ ಅಲ್ ಶಬಾಬ್‍ನಲ್ಲಿ ಈಕೆ ಸಕ್ರಿಯಳಾಗಿದ್ದು ಸೊಮಾಲಿಯಾ ಮತ್ತು ಕೀನ್ಯಾದಲ್ಲಿ ಸಂಭವಿಸಿದ ಕಾರ್‍ಸ್ಫೋಟಗಳು, ಆತ್ಮಹತ್ಯಾ ದಳದ ಕೃತ್ಯಗಳಲ್ಲಿ ಇವಳದ್ದೇ ತಂತ್ರಗಾರಿಕೆ ಇತ್ತೆಂದು ಯುಕೆ ಮಿರರ್ ತನ್ನ ವರದಿಯಲ್ಲಿ ಹೇಳಿದೆ. ನೈರೋಬಿಯ ವೈಟ್ ಗೇಟ್ ಮಾಲ್ ದಾಳಿಯಲ್ಲಿ 67 ಮಂದಿ ಹತ್ಯೆಯ ಸಂಚು ಕೂಡ ಈಕೆಯದ್ದೇ ಎಂದು ಶಂಕಿಸಲಾಗಿದೆ. ಅಲ್ ಶಬಾಬ್ ನಾಯಕ ಅಹ್ಮದ್ ಉಮರ್‍ನ ಅತ್ಯಂತ ಸಮೀಪವರ್ತಿಯಾಗಿದ್ದು, ಆತ್ಮಾಹುತಿ ದಳಕ್ಕೆ ಸೇರಿಸುವುದರಲ್ಲಿ ನಿಷ್ಣಾತಳು ಎಂದು ವರದಿ ಮಾಡಿದೆ.
Advertisement