ಸುದರ್ಶನಗೆ ಇಲ್ಲ ಕೆಪಿಎಸ್‍ಸಿ ಭಾಗ್ಯ

ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ಶಿಫಾರಸುಗೊಂಡಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಮೂವರು ಸದಸ್ಯರ ಹೆಸರನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು...
ರಾಜ್ಯಪಾಲ ವಿ.ಆರ್.ವಾಲಾ
ರಾಜ್ಯಪಾಲ ವಿ.ಆರ್.ವಾಲಾ

ಬೆಂಗಳೂರು: ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ಶಿಫಾರಸುಗೊಂಡಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಮೂವರು ಸದಸ್ಯರ ಹೆಸರನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು ತಿರಸ್ಕರಿಸಿದ್ದಾರೆ.

ಮಂಗಳವಾರ ಸಾಯಂಕಾಲ ರಾಜ್ಯಪಾಲರು ಸರ್ಕಾರದ ಪ್ರಸ್ತಾಪಿತ ಕಡತವನ್ನು ವಾಪಸ್ ಕಳುಹಿಸಿದ್ದು, ಕೆಪಿಎಸ್‍ಸಿ ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ವಿ.ಆರ್.ಸುದರ್ಶನ್ ಅವರ ಜತೆಗೆ ಸದಸ್ಯ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ಸೈಯದ್ ವುಲ್ಪತ್ ಹುಸೇನ್, ಡಾ. ರವಿಕುಮಾರ್ ಹಾಗೂ ಮೃತ್ಯುಂಜಯ ಅವರ ಪಟ್ಟಿಯನ್ನು ವಾಪಸ್ ಕಳುಹಿಸಲಾಗಿದೆ. 2014ರ ಡಿಸೆಂಬರ್ 24ರಂದು ರಾಜ್ಯ ಸರ್ಕಾರ ಸುದರ್ಶನ್ ಸೇರಿದಂತೆ 8 ಮಂದಿ ಸದಸ್ಯರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ ಕೆಪಿಎಸ್‍ಸಿಗೆ
ರಾಜಕೀಯ ಹಿನ್ನೆಲೆ ಉಳ್ಳವರನ್ನು ನೇಮಕ ಮಾಡಲಾಗಿದೆ ಎಂಬ ವಿವಾದ ಅಂದಿನಿಂದಲೇ ಆರಂಭಗೊಂಡಿತ್ತು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾಜಕೀಯ ಹಿನ್ನೆಲೆಯುಳ್ಳವರನ್ನು ಕೆಪಿಎಸ್‍ಸಿಗೆ ನೇಮಕ ಮಾಡಬಾರದೆಂಬ ಒಂದು ವಾದದ ಜತೆಗೆ ಸರ್ಕಾರ ಶಿಫಾರಸು ಮಾಡಿದ ಸದಸ್ಯರ ಪೈಕಿ ಕೆಲವರ ವಿರುದ್ಧ ಆರೋಪವೂ ವ್ಯಕ್ತವಾಗಿತ್ತು. ಈ ಸಂಬಂಧ ಕೆಲ ಸಾಮಾಜಿಕ ಕಾರ್ಯಕರ್ತರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಸಂಬಂಧ ಬಿಜೆಪಿ ಮುಖಂಡರು ರಾಜಭವನಕ್ಕೆ ಭೇಟಿ ನೀಡಿ ಸರ್ಕಾರದ ಶಿಫಾರಸನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಚರ್ಚೆ ನಡೆಸಿದ ರಾಜ್ಯಪಾಲ ವಿ.ಆರ್.ವಾಲಾ ಜನವರಿ 2ರಂದು ಈ ಶಿಫಾರಸು ಪ್ರಸ್ತಾಪದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ಕಡತವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಆದಾಗಿಯೂ ಸರ್ಕಾರ ಕೆಲ ಕಡತಗಳ ಜತೆಗೆ ಇದೇ ಪಟ್ಟಿಯನ್ನು ಮತ್ತೆ ರಾಜಭವನಕ್ಕೆ ಕಳಹಿಸಿತ್ತು. ಮಾತ್ರವಲ್ಲ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ವಿ.ಆರ್.ಸುದರ್ಶನ್ ಅವರ ಬಗ್ಗೆ ಲೋಕಾಯುಕ್ತ ಕ್ಲೀನ್‍ಚಿಟ್ ನೀಡಿದೆ ಎಂಬ ವರದಿಯನ್ನು ರಾಜಭವನಕ್ಕೆ ಕಳುಹಿಸಲಾಗಿತ್ತು. ಆದರೆ ಇದನ್ನು ಪರಿಗಣಿಸದ ರಾಜ್ಯಪಾಲರು ಸುದರ್ಶನ್ ಮತ್ತು ಮೂವರು ಸದಸ್ಯರ ಹೆಸರನ್ನು ಅಂತಿಮಗೊಳಿಸದೇ ಪಟ್ಟಿಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಕೇವಲ ನಾಲ್ವರು ಸದಸ್ಯರ ಹೆಸರನ್ನು ಮಾತ್ರ ಅಂತಿಮಗೊಳಿಸಿ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಕಡತವನ್ನು ಕಳುಹಿಸಿದ್ದರು. ಈ ಮಧ್ಯೆ ವಿ.ಆರ್. ಸುದರ್ಶನ್ ಅವರಿಗೆ ಕ್ಲೀನ್ಚಿಟ್ ನೀಡಿದ್ದ ಲೋಕಾಯುಕ್ತ ವರದಿಯಲ್ಲೇ ಲೋಪವಿದೆ ಎಂಬ ಕೂಗು ಕೇಳಿಬಂದಿತ್ತು. ಸಾಲದಕ್ಕೆ ಆ ವರದಿ ನೀಡಿದ ಅಧಿಕಾರಿಯನ್ನು ಲೋಕಾಯುಕ್ತದಿಂದ ವರ್ಗಾವಣೆ ಮಾಡಲಾಗಿತ್ತು.

ಸದಸ್ಯ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ಸೈಯದ್ ಉಲ್ಫತ್ ಹುಸೇನ್ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿದ್ದಾಗ ಮುಂಬಯಿ ಸ್ಫೋಟದ ರೂವಾರಿ ಟೈಗರ್ ಮೆಮೂನ್ ಗೆ ಗನ್ ಲೈಸೆನ್ಸ್ ಕೊಟ್ಟಿದ್ದರು ಎಂಬ ಆರೋಪವಿತ್ತು. ಡಾ.ರವಿಕುಮಾರ್ ಕೂಡಾ ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಪ್ರೊ.ಗೋವಿಂದಯ್ಯ, ಮೈಕೆಲ್ ಬರೆಟ್ಟೊ ಪ್ರೊ.ನಾಗಾಬಾಯಿ ಬುಳ್ಳ, ರಘುನಂದನ್ ರಾಮಣ್ಣ ಅವರ ಸದಸ್ಯತ್ವಕ್ಕೆ ಈ ಮುನ್ನವೇ ರಾಜ್ಯಪಾಲರು ಸಮ್ಮತಿಸಿ ಅಂಕಿತ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com