ತಾವು ಕರೆ ನೀಡಿದ ಬಂದ್ ಹಿಂಸಾಚಾರಕ್ಕೆ ತಿರುಗಿದರೆ ರಾಜಕಾರಣಿಗಳಿಗೆ ಜೈಲು!

ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿ ಹಾನಿಗೊಳಗಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ.
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ(ಸಾಂದರ್ಭಿಕ ಚಿತ್ರ)
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ(ಸಾಂದರ್ಭಿಕ ಚಿತ್ರ)

ನವದೆಹಲಿ: ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿ ಹಾನಿಗೊಳಗಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ.
 ಸಾರ್ವಜನಿಕ ಆಸ್ತಿ ನಾಶ ತಡೆ ಕಾಯ್ದೆ ತಿದ್ದುಪಡಿ ಮಸೂದೆ ಜಾರಿ ಮಾಡಲು ಕೇಂದ್ರ ಗೃಹಸಚಿವಾಲಯ ಸಿದ್ಧತೆ ನಡೆಸಿದೆ. ಮಸೂದೆ ಕರಡು ಪ್ರತಿ ಪ್ರಕಾರ, ರಾಜಕೀಯ ನಾಯಕರ ಬೆಂಬಲಿಗರು ನಡೆಸುವ ಪ್ರತಿಭಟನೆಯಲ್ಲಿ ಸಾರ್ವಜನಿಕರ ಸ್ವತ್ತಿಗೆ ಹಾನಿಯುಂಟಾದರೆ ಅದಕ್ಕೆ ರಾಜಕೀಯ ಗಣ್ಯರನ್ನೇ ಹೊಣೆ ಮಾಡಲಾಗುತ್ತದೆ. ಒಂದು ವೇಳೆ ಪ್ರತಿಭಟನೆಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕರ್ತರು  ಭಾಗವಹಿಸಿದರೆ ಅದಕ್ಕೆ ಸಂಸ್ಥೆಗಳ ಪದಾಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ.  ಸಾರ್ವಜನಿಕ ಆಸ್ತಿ ನಾಶ ತಡೆ ಕಾಯ್ದೆ ತಿದ್ದುಪಡಿ ಮಸೂದೆಗೆ ಭಯೋತ್ಪಾದನಾ ನಿಗ್ರಹ ಕಾನೂನು ಪೋಟ ಕಾಯ್ದೆಯ ಅಧಿನಿಯಮಗಳನ್ನೂ ಅಳವಡಿಸಲಾಗಿದ್ದು,  ಅಪರಾಧಿಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆ ಕೊಡಿಸುವುದಕ್ಕೆ ಇದು ಸಹಕಾರಿಯಾಗಲಿದೆ.

ಮಸೂದೆಯ ಕರಡು ಪ್ರತಿ ಪ್ರಕಾರ, ಪ್ರತಿಭಟನೆ, ಬಂದ್ ಗಳಲ್ಲಿ ಸರ್ಕಾರದ ಆಸ್ತಿಗೆ ಹಾನಿಯುಂಟು ಮಾಡುವವರು, ಹಾನಿಗೊಳಗಾದ ಸ್ವತ್ತಿನ ಮಾರುಕಟ್ಟೆ ಬೆಲೆಯಷ್ಟೇ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಆರೋಪಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲವೆಂದು ಖಾತ್ರಿಯಾಗುವವರೆಗೂ, ಆತನಿಗೆ  ಜಾಮೀನು ನೀಡುವ ನ್ಯಾಯಾಲಯದ ಅಧಿಕಾರವನ್ನೂ ಮೊಟಕುಗೊಳಿಸಲಾಗಿದೆ.

ಬಂದ್, ಪ್ರತಿಭಟನೆಗಳು ಉಗ್ರ ಸ್ವರೂಪ ಪಡೆದರೆ,  ಪ್ರತಿಭಟನೆಗೆ ಕರೆ ನೀಡಿದ್ದ ಸಂಘಟಾನೆಗಳನ್ನೇ ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಸೂದೆಗೆ ಸಿ.ಪಿ.ಐ ನಾಯಕ  ಡಿ.ರಾಜ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ  ಕಠಿಣ ಕಾನೂನು ರೂಪಿಸಿದೆ. ಭಾರತ ಇನ್ನೂ ಪ್ರಜಾಪ್ರಭುತ್ವ ದೇಶವಾಗಿದ್ದು, ದೇಶದ ಪ್ರತಿಯೊಬ್ಬ  ನಾಗರಿಕನಿಗೂ ಪ್ರತಿಭಟನೆ ನಡೆಸುವ  ಹಕ್ಕಿದೆ ಎಂದು ಹೇಳಿದ್ದಾರೆ.

ಮಸೂದೆ ಕರಡು ಪ್ರತಿ ಸಿದ್ಧವಾಗುತ್ತಿದ್ದು, ಸುಪ್ರೀಂ ಕೋರ್ಟ್ ನಿಯೋಜಿತ ನ್ಯಾ.ಟಿ.ಸಿ ಥಾಮಸ್  ನೇತೃತ್ವದ ಸಮಿತಿಯಿಂದ ಪ್ರಸ್ತಾವನೆ ಪಡೆಯಲಾಗುತ್ತಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕುಮಾರ್  ಅಲೋಕ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com