ನವೀನ್ ಜಿಂದಾಲ್, ಮಧು ಕೋಡಾ, ದಾಸರಿ ನಾರಾಯಣ್ ರಾವ್
ನವೀನ್ ಜಿಂದಾಲ್, ಮಧು ಕೋಡಾ, ದಾಸರಿ ನಾರಾಯಣ್ ರಾವ್

ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್, ಮಧು ಕೋಡಾ ಸೇರಿ 10 ಆರೋಪಿಗಳಿಗೆ ಜಾಮೀನು

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್, ಕಲ್ಲಿದ್ದಲು ಖಾತೆ ಮಾಜಿ ರಾಜ್ಯ ಸಚಿವ ದಾಸರಿ ನಾರಾಯಣ್ ರಾವ್,...
Published on

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್, ಕಲ್ಲಿದ್ದಲು ಖಾತೆ ಮಾಜಿ ರಾಜ್ಯ ಸಚಿವ ದಾಸರಿ ನಾರಾಯಣ್ ರಾವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಇತರ ಏಳು ಮಂದಿಗೆ ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾರ್ಖಂಡ್‌ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆ ಪ್ರಕರಣ ಸಂಬಂಧ, ಮೇ 22 ರಂದು ಕೋರ್ಟ್ ಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು  ಸಿಬಿಐ ವಿಶೇಷ ನ್ಯಾಯಾಧೀಶ ಭರತ್‌ ಪರಶಾರ್ ಅವರ ಮುಂದೆ ಹಾಜರಾದ ಜಿಂದಾಲ್, ರಾವ್ ಹಾಗೂ ಕೋಡಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಿದೆ.

ಜಿಂದಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಮೇಶ್ ಗುಪ್ತಾ ಅವರು, ತಮ್ಮ ಕಕ್ಷಿದಾರ ಸಿಬಿಐ ಕರೆದಾಗಲೆಲ್ಲ ವಿಚಾರಣೆಗೆ ಹಾಜರಾಗಿದ್ದಾರೆ ಮತ್ತು ಅವರು ತಲೆಮರೆಸಿಕೊಳ್ಳುವ ಅಥವಾ ಪಲಾಯನ ಮಾಡಲು ಸಾಧ್ಯವೆ ಇಲ್ಲ ಎಂದರು.

ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕ ವಿ.ಕೆ.ಶರ್ಮಾ ಅವರು, ಆರೋಪಿಗಳ ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಿಗಳು ಆಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡಬೇಡಿ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಜಿಂದಾಲ್, ಕೋಡಾ ಸೇರಿ ಹತ್ತು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದರು.

ಪ್ರಕರಣ ಸಂಬಂಧ ಏಪ್ರಿಲ್ 29ರಂದು ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಆಧರಿಸಿ, ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 420 ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿ ಸಿಬಿಐ ದೋಷಾರೋಪ ಸಲ್ಲಿಸಿದೆ.

ಜಿಂದಾಲ್, ಕೋಡಾ ಅವರಲ್ಲದೇ ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದ ದಾಸರಿ ನಾರಾಯಣರಾವ್, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ, ಜ್ಞಾನ ಸ್ವರೂಪ್ ಗರ್ಗ್, ಸುರೇಶ್ ಸಿಂಘಾಲ್, ರಾಜೀವ್ ಜೈನ್, ಗಿರೀಶ್ ಕುಮಾರ್ ಸುನೆಜಾ, ಆರ್.ಕೆ.ಸರಫ್ ಹಾಗೂ ರಾಮಕೃಷ್ಣ ಪ್ರಸಾದ್ ಜಾಮೀನು ಪಡೆದಿರುವ ಇತರೆ ಆರೋಪಿಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com