
ಭೂಪಾಲ್: ಯುವತಿಯೊಬ್ಬಳ ಮೇಲೆ ಆ್ಯಸಿಡ್ ಮಾಡಿದ ಯುವಕನೊಬ್ಬ ನಂತರ ತನ್ನ ಹೊಟ್ಟೆಗೆ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ರೇಣುಸಹು (21) ಎಂಬ ಯುವತಿ ಜಿಮ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನೆರೆ ಮನೆಯ ಸಂಜಯ್ ಎಂಬಾತ ಹಿಂಬಾಲಿಸಿದ್ದಾನೆ. ಈ ವೇಳೆ ಕೋಪ ಗೊಂಡ ರೇಣುಸಹು ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹೋಗಿದ್ದಾರೆ. ಈ ವೇಳೆ ಬೇರೆ ಪೋಲೀಸ್ ಠಾಣೆಗೆ ಹೋಗುವಂತೆ ಪೊಲೀಸರು ಯುವತಿಗೆ ಸೂಚಿಸಿದ್ದಾರೆ.
ನಂತರ ಯುವತಿಯನ್ನು ಮತ್ತೆ ಹಿಂಬಾಲಿಸಿದ ಸಂಜಯ್ ಇದ್ದಕ್ಕಿದ್ದಂತೆ ಯುವತಿಯನ್ನು ತಡೆದು ಕೈಯಲ್ಲಿದ್ದ ಆ್ಯಸಿಡ್ ನ್ನು ಮುಖಕ್ಕೆ ಹಾಕಿದ್ದಾನೆ. ಇದನ್ನು ಕಂಡ ಸ್ಥಳೀಯರು ಸಂಜಯನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಸಂಜಯ್ ತನ್ನ ಜೇಬಲ್ಲಿದ್ದ ಚಾಕು ತೆಗೆದುಕೊಂಡು ತನ್ನ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಂಜಯ್ ಪಾಟೀಲ್ ನೆರೆಮನೆಯ ಹುಡುಗನಾಗಿದ್ದು, ಹಲವು ವರ್ಷಗಳಿಂದ ನಮಗೆ ಗೊತ್ತಿರುವ ಹುಡುಗ. ಕೆಲವು ವರ್ಷಗಳಿಂದ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ನಾವು ಪೊಲೀಸರಿಗೆ ದೂರು ಸಹ ನೀಡುತ್ತಿದ್ದೆವು. ಪೊಲೀಸರು ಸಂಜಯ್ ನನ್ನು ಠಾಣೆಗೆ ಕರೆದುಕೊಂಡು ಹೋಗಿ, ಬುದ್ದಿವಾದ ಹೇಳಿ ಮತ್ತೆ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ ನಮ್ಮ ಮಗಳ ಮೇಲೆ ದಾಳಿ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಹೇಳಿಕೊಂಡಿದ್ದಾರೆ.
ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement