

ನವದೆಹಲಿ: ಭಾರತ ಮತ್ತು ಚೀನಾ ಸಂಬಂಧ ವೃದ್ಧಿಸಬೇಕಾದರೆ ಮೊದಲು ಗಡಿ ಸಮಸ್ಯೆ.ಯನ್ನು ಬಗೆಹರಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಈ ಎರಡೂ ದೇಶಗಳ ನಡುವಿನ ವಿಷಯಗಳು ನಾಜೂಕಾಗಿದ್ದು ಅವುಗಳನ್ನು ಪರಿಹರಿಸಲು ಸನ್ನದ್ಧವಾಗಬೇಕಿದೆ ಎಂದು ಹೇಳಿದರು. ಶುಕ್ರವಾರ ನವದೆಹಲಿಯಲ್ಲಿ ಗಡಿ ಭದ್ರತಾ ಪಡೆಯಿಂದ ಮಾಜಿ ಪೊಲೀಸ್ ಅಧಿಕಾರಿ ರುಸ್ತಮ್ಜಿ ಅವರ ನೆನಪಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿ ಸಮಸ್ಯೆ ಇತ್ಯರ್ಥಪಟ್ಟರೆ ನಮ್ಮ ಸಂಬಂಧವನ್ನು ಉತ್ತಮ ದೃಷ್ಟಿಯಿಂದ ನೋಡಬಹುದು ಎಂದು ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವೆ 3 ಸಾವಿರದ 488 ಕಿ.ಮೀ ಉದ್ದವಾದ ಗಡಿಯಿದೆ. ಇದು ಬಹಳ ಕ್ಲಿಷ್ಟಕರವಾದ, ಪರ್ವತಮಯ ಹಿಮಪದರ ಹೊದಿಕೆಯಿಂದ ಕೂಡಿದೆ. ಈ ಗಡಿ ಸಮಸ್ಯೆಯನ್ನು ಬಗೆಹರಿಸುವುದು ಭಾರತದ ಮುಂದಿರುವ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ದೇಶದ ಪೂರ್ವ ಭಾಗದಲ್ಲಿ ಭಯೋತ್ಪಾದಕ ಗುಂಪುಗಳು ತಳವೂರುತ್ತಿದ್ದು, ಅವಕ್ಕೆ ಕಾರ್ಯಾಚರಣೆ ನಡೆಸಲು ದೇಶದೊಳಗೆ ಕೆಲವರು ಬೆಂಬಲ ನೀಡುತ್ತಿದ್ದಾರೆ. ಗಡಿಗಳಲ್ಲಿ ಮತ್ತು ಗಡಿ ರಾಜ್ಯಗಳಲ್ಲಿ ಭಯೋತ್ಪಾದಕ ಗುಂಪುಗಳು ದಾಳಿ ನಡೆಸುತ್ತವೆ ಎಂದು ಕಳವಳ ನ್ಯಕ್ತಪಡಿಸಿದರು.
ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರನ್ನು ತಡೆಯಲು ಆ ಸರ್ಕಾರದ ಸಹಕಾರದ ಅಗತ್ಯವಿದೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಐಎಸ್ಐ ನೇಪಾಳದಲ್ಲಿ ತಳವೂರಲು ಪ್ರಯತ್ನಿಸುತ್ತಿದೆ. ಆ ದೇಶವು ಸಂಘಟಿತ ಅಪರಾಧ ಮತ್ತು ಅಪರಾಧಿಗಳಿಗೆ ಕೇಂದ್ರವಾಗಿದೆ ಎಂದರು.
ನರೇಂದ್ರ ಮೋದಿ ಸರ್ಕಾರದ ಗಡಿ ಭದ್ರತೆ ಯೋಜನೆ ಕುರಿತು ವಿವರಿಸಿದ ದೋವಲ್, ಗಡಿಗಳಲ್ಲಿ ಉಪಗ್ರಹಗಳ ಮೂಲಕ ಚಲನವಲನಗಳನ್ನು ವೀಕ್ಷಿಸಲು ವ್ಯವಸ್ಥೆ ನಡೆಸುತ್ತಿದೆ. ಕಡಲ ವಲಯಗಳಲ್ಲಿ ಅಕ್ರಮ ತಡೆಗಟ್ಟಲು ಗುರುಂಗಾವ್ ನಲ್ಲಿ ಸ್ವದೇಶಿ ನಿರ್ಮಿತ ಘಟಕವನ್ನು ತೆರೆಯಲಾಗಿದೆ. ಅದು ಕಾರ್ಯಾರಂಭ ಮಾಡುತ್ತಿದೆ ಎಂದರು.
ಅಜಿತ್ ದೋವಲ್ ಇತ್ತೀಚೆಗೆ ಪ್ರಧಾನಿ ಮೋದಿಯವರೊಂದಿಗೆ ಚೀನಾ ಪ್ರವಾಸದಲ್ಲಿ ಭಾಗಿಯಾಗಿದ್ದರು.