

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಒಂದು ವರ್ಷದ ತನ್ನ ಕೆಲಸಗಳ ಬಗ್ಗೆ ಉತ್ತಮ ಜಾಹಿರಾತು ನೀಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಹೇಳಿದ್ದಾರೆ.
ಇಂದು ಎನ್‌ಡಿಎ ಸರ್ಕಾರದ ಆರ್ಥಿಕ ಬೆಳವಣಿಗೆಗಳ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ, ಈ ಸರ್ಕಾರದಂತೆ ನಮ್ಮ ಸರ್ಕಾರದ ಸಾಧನೆಗಳನ್ನು ನಾವು ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಆದರೆ ಅವರು ಉತ್ತಮವಾಗಿ ಪ್ರಚಾರ ಮಾಡಿದ್ದಾರೆ ಎಂದರು.
ಎನ್‌ಡಿಎ ಸರ್ಕಾರ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಅಭಿವೃದ್ಧಿಯೇನು ಸಾಧಿಸಿಲ್ಲ. ಆರ್ಥಿಕ ಅಭಿವೃದ್ಧಿ ಕುಂಟಿತವಾಗಿದೆ, ಒಟ್ಟಾರೆ ಬೇಡಿಕೆ ಕುಸಿದಿದೆ ಮತ್ತು ಪ್ರಮುಖ ವಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ಸಾರ್ವಜನಿಕ ಮತ್ತು ಖಾಸಗಿ ವಲಯದ ಹಲವು ಯೋಜನೆಗಳನ್ನು ತೆಡೆ ಹಿಡಿದಿದೆ. ಸಾರ್ವಜನಿಕ ವಲಯದ 161 ಯೋಜನೆಗಳು ಹಾಗೂ ಖಾಸಗಿ ವಲಯದ 565 ಯೋಜನೆಗಳನ್ನು ತಡೆಹಿಡಿಯಲಾಗಿದೆ ಎಂದು ಮಾಜಿ ಸಚಿವರು ಆರೋಪಿಸಿದರು.