ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಾವು ಎಂದಿಗೂ ಅಧಿಕಾರವನ್ನು ವೈಯಕ್ತಿಕ ವಿಚಾರಕ್ಕೆ ಬಳಸಿಕೊಂಡಿಲ್ಲ ಎಂಬ ಹೇಳಿಕೆಯ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಪ್ರಧಾನಿ ಕೇವಲ ಅವರು ಮಾತ್ರ ಪ್ರಾಮಾಣಿಕರಾಗಿರುವಂತೆ ನೋಡಿಕೊಂಡರೆ ಸಾಲದು, ಸುತ್ತಮುತ್ತಲಿನ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನೂ ಗಮನಿಸಬೇಕು ಎಂದು ಹೇಳಿದ್ದಾರೆ.
ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಮಿತ್ ಶಾ ಅವರು, ಪ್ರಧಾನಿ ಕೇವಲ ಅವರು ಮಾತ್ರ ಪ್ರಾಮಾಣಿಕರಾಗಿರುವಂತೆ ನೋಡಿಕೊಂಡರೆ ಸಾಲದು, ಸುತ್ತಮುತ್ತಲಿನ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನೂ ಗಮನಿಸಬೇಕು. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಮಾಜಿ ಪ್ರಧಾನಿ ಸಿಂಗ್ ಅವರು ಅಧಿಕಾರದಲ್ಲಿದ್ದಾಗಲೇ ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ, 2ಜಿ ಹಗರಣ ನಡೆದಿತ್ತು.
ಇಷ್ಟೆಲ್ಲಾ ಹಗರಣಗಳು ತಮ್ಮ ಅಧಿಕಾರದ ಅವಧಿಯಲ್ಲೇ ನಡೆಯುತ್ತಿದ್ದರು ಸಿಂಗ್ ಅವರು ಅಂದು ಮೌನವಾಗಿದ್ದದ್ದೇಕೆ?...ಕಲ್ಲಿದ್ದಲು ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ಸುಳ್ಳಾ...? ಎಂದು ಅಮಿತ್ ಶಾ ಮನಮೋಹನ್ ಸಿಂಗ್ ಅವರಿಗೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ.
2ಜಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಪ್ರದೀಪ್ ಬೈಜಲ್ ಅವರು ತಾವು ಬರೆದಿರುವ 'ದಿ ಕಂಪ್ಲೀಟ್ ಸ್ಟೋರಿ ಅಫ್ ಇಂಡಿಯನ್ ರಿಫಾರ್ಮ್ಸ್: 2ಜಿ, ಪವರ್ ಅಂಡ್ ಪ್ರೈವೇಟ್ ಎಂಟರ್ ಪ್ರೈಸಸ್ - ಎ ಪ್ರಾಕ್ಟಿಷನರ್ಸ್ ಡೈರಿ' ಎನ್ನುವ ಪುಸ್ತಕದಲ್ಲಿ ಮನಮೋಹನ್ ಸಿಂಗ್ ಅವರು ತಮ್ಮ ಸರ್ಕಾರಕ್ಕೆ ಸಹಕಾರ ನೀಡಬೇಕು ಇಲ್ಲದೆ ಹೋದರೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಮಾಜಿ ಪ್ರಧಾನಿ ಸಿಂಗ್ ವಿರುದ್ಧ ಗಂಭೀರ ಆರೋಪ ವ್ಯಕ್ತಪಡಿಸಿದ್ದರು. ಈ ಆರೋಪ ಮನಮೋಹನ್ ಸಿಂಗ್ ವಿರುದ್ಧ ಹಲವು ಚರ್ಚೆಗಳು ನಡೆಯಲು ಕಾರಣವಾಗಿತ್ತು.
ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಮೊದಲ ಬಾರಿ ಮೌನ ಮುರಿದಿದ್ದ ಮನಮೋಹನ್ ಸಿಂಗ್ ಅವರು, ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಿಂದ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು ಬೆದರಿಕೆಯ ನೆರಳಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ದೇಶದ ಜನತೆಯ ಗಮನ ಬೇರೆಡೆ ಸೆಳೆಯಲು ಅನಾವಶ್ಯಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಯುಪಿಎ ಸರ್ಕಾರದ ಯೋಜನೆಗಳನ್ನೇ ಮರುನಾಮಕರಣ ಮಾಡಿ ತಮ್ಮದೇ ಯೋಜನೆ ಎಂದು ಎನ್ ಡಿಎ ಸರ್ಕಾರ ಬಿಂಬಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ತಮ್ಮ ವಿರುದ್ಧ ಆರೋಪ ವ್ಯಕ್ತಪಡಿಸಿದ್ದ ಪ್ರದೀಪ್ ಬೈಜಲ್ ಅವರ ಆರೋಪವನ್ನು ತಳ್ಳಿಹಾಕಿದ್ದ ಸಿಂಗ್ ಅವರು, ಪ್ರದೀಪ್ ಬೈಜಲ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಸರ್ಕಾರಿ ಕಚೇರಿಯನ್ನು ಎಂದಿಗೂ ವೈಯಕ್ತಿಕ ವಿಚಾರಕ್ಕೆ ಬಳಸಿಕೊಂಡಿಲ್ಲ. ನನ್ನ ವಿರುದ್ಧದ ಎಲ್ಲಾ ಆರೋಪಗಳಿಗೂ ಕ್ಲೀನ್ ಚಿಟ್ ಪಡೆದು ಹೊರಬರುವೆ ಎಂದು ಹೇಳಿದ್ದರು.
Advertisement