ತೃತೀಯ ಲಿಂಗಿ ಪ.ಬಂಗಾಳದಲ್ಲಿ ಮಹಿಳಾ ಕಾಲೇಜು ಪ್ರಾಂಶುಪಾಲೆ

ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ತೃತೀಯ ಲಿಂಗಿಗಳ ಪಾಲಿಗೊಂದು ಖುಷಿಯ ಸುದ್ದಿ. ವಿಶ್ವದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಕಾಲೇಜು ಪ್ರಾಂಶುಪಾಲರಾಗುತ್ತಿದ್ದಾರೆ...
ಮನಾಬಿ ಬಂಡೋಪಾಧ್ಯಾಯ್
ಮನಾಬಿ ಬಂಡೋಪಾಧ್ಯಾಯ್

ಕೋಲ್ಕತಾ: ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ತೃತೀಯ ಲಿಂಗಿಗಳ ಪಾಲಿಗೊಂದು ಖುಷಿಯ ಸುದ್ದಿ. ವಿಶ್ವದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಕಾಲೇಜು ಪ್ರಾಂಶುಪಾಲರಾಗುತ್ತಿದ್ದಾರೆ.

ಪಶ್ಚಿಮ ಬಂಗಾಳದ ಕ್ರಿಶ್ ನಗರ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ಮನಾಬಿ ಬಂಡೋಪಾಧ್ಯಾಯ್ ಜೂ.9ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಮನಾಬಿ ಸದ್ಯ ವಿವೇಕಾನಂದ ಸತೋಬರ್‍ಶಿಕಿ ಮಹಾ ವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನಾಬಿ ಅವರನ್ನು ಮಹಿಳಾ ಕಾಲೇಜು ಪ್ರಾಂಶುಪಾಲರನ್ನಾಗಿ ನೇಮಿಸುವ ನಿರ್ಧಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಅವರೊಬ್ಬ ಉತ್ತಮ ಆಡಳಿತಗಾರ್ತಿ ಎಂದು ಕಲ್ಯಾಣಿ ವಿವಿಯ ಕುಲಪತಿ ರತನ್ ಲಾಲ್ ಹಂಗ್ಲೂ ಹೇಳಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಉಜ್ಜಲ್ ಬಿಸ್ವಾಸ್ ಕೂಡ, ಈ ನೇಮಕ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಕಾಲೇಜನ್ನು ಮುನ್ನಡೆಸಲು ನಮಗೆ ಬಲಿಷ್ಠ ವ್ಯಕ್ತಿತ್ವದ ವ್ಯಕ್ತಿಯೊಬ್ಬರ ಅಗತ್ಯವಿತ್ತು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಲೈಂಗಿಕ ಅಲ್ಪಸಂಖ್ಯಾತರೊಬ್ಬರನ್ನು ಪ್ರಾಂಶುಪಾಲರಾಗಿ ನೇಮಿಸುವ ನಿರ್ಧಾರವನ್ನು ಕಾಲೇಜು ಸೇವೆಗಳ ಆಯೋಗವೇ ತೆಗೆದುಕೊಂಡಿದೆ. ತಾವು ಆ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ. ನಮ್ಮ ಮುಕ್ತ ಮನಸ್ಸಿನ ಕುರಿತು ಅವರಿಗೆ ಅರಿವಿದೆ. ಅವರ ನಿರ್ಧಾರದಿಂದ ನನಗೆ ಸಂತೋಷವಾಗಿದೆ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

2003ರಲ್ಲಿ ಲಿಂಗ ಪರಿವರ್ತನೆ!
ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಮನಾಬಿ ಬಾಲ್ಯದಲ್ಲಿ ಹುಡುಗನ ರೀತಿಯೇ ಬೆಳೆದವರು. ಆದರೆ, ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಯನ್ನು ಅರಿತುಕೊಂಡ ನಂತರ ಹೆಣ್ಣಿನಂತೆ ಬದುಕುವ ತೀರ್ಮಾನ ತೆಗೆದುಕೊಂಡರು. `ನನ್ನಲ್ಲೇನು ದೋಷವಿದೆ? ನನ್ನ ದೇಹದ ಪ್ರತಿಯೊಂದು ಮೂಳೆಯೂ ನಾನೊಬ್ಬಳು ಮಹಿಳೆ ಎನ್ನುವ ರೀತಿ ಯಾಕೆ ಚೀರುತ್ತಿದೆ ಎಂದು ಒಂದು ಕಾಲದಲ್ಲಿ ನನಗೆ ನಾನೇ ಕೇಳಿಕೊಳ್ಳುತ್ತಿದ್ದೆ'' ಆ ಬಳಿಕವೇ ನಾನು 2003ರಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾಗಿ ಮನಾಬಿ ಹೇಳಿಕೊಂಡಿದ್ದಾರೆ. ಮನಾಬಿ ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶಾಲೆಯನ್ನೂ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com