ಯಾವುದೇ ಸಮಯ, ಯಾವುದೇ ಸ್ಥಳವಾದರೂ ಚರ್ಚೆಗೆ ಸಿದ್ಧ: ರಾಹುಲ್ ಗೆ ಸ್ಮೃತಿ ಸವಾಲು
ನವದೆಹಲಿ: ಮದ್ರಾಸ್ ಐಐಟಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಘಟನೆಗೆ ನಿಷೇಧ ಹೇರಿರುವುದರ ವಿರುದ್ಧ ಸ್ಮೃತಿ ಇರಾನಿ ನಿವಾಸದೆದುರು ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವುದರ ಕುರಿತಂತೆ ಕೆಂಡಾಮಂಡಲವಾಗಿರುವ ಸ್ಮೃತಿ ಇರಾನಿಯವರು ರಾಹುಲ್ ವಿರುದ್ಧ ಶುಕ್ರವಾರ ವಾಗ್ಧಾಳಿ ನಡೆಸಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಬಗ್ಗೆ ಕೆಂಡಕಾರಿರುವ ಸ್ಮೃತಿ ಇರಾನಿ, ಎದುರಿಗೆ ಬಂದು ನೇರವಾಗಿ ಯುದ್ಧ ಮಾಡಲು ಸಾಧ್ಯವಾಗದೆ ವಿದ್ಯಾರ್ಥಿ ಸಂಘಟನೆಗಳನ್ನು ಮುಂದಿಟ್ಟುಕೊಂಡು ಹೇಡಿಗಳ ಹಾಗೆ ವರ್ತಿಸುತ್ತಿದ್ದೀರಾ. ವಿದ್ಯಾರ್ಥಿ ಸಂಘಟನೆಗಳಿಗೆ ಆದೇಶ ಬಂದ ಕೂಡಲೇ ಪ್ರತಿಭಟನೆಗಿಳಿಯುವಂತೆ ನಿನ್ನೆಯೇ ಕರೆ ನೀಡಿದ್ದಿರಿ ಎಂಬುದು ನನಗೆ ಗೊತ್ತಿದೆ. ಇಂದು ಆದೇಶ ಬಂದ ಕೂಡಲೇ ವಿದ್ಯಾರ್ಥಿ ಸಂಘಟನೆಯ ಸದಸ್ಯರ ರೂಪದಲ್ಲಿರುವ ನಿಮ್ಮ ಕಡೆಯ ಗೂಂಡಾಗಳು ನಾನು ಕೆಲಸದಲ್ಲಿರುವ ಸಂದರ್ಭದಲ್ಲಿ ನನ್ನ ಮನೆಯ ಹತ್ತಿರ ಪ್ರತಿಭಟನೆಗಿಳಿದಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಶಿಕ್ಷಣ ವಲಯದಲ್ಲಿ ಆರ್ ಎಸ್ಎಸ್ ಹಸ್ತಕ್ಷೇಪ ಮಾಡುವುದರ ರಾಹುಲ್ ವಿರೋಧ ಹೇಳಿಕೆ ಕುರಿತಂತೆ ಮಾತನಾಡಿರುವ ಅವರು, ಧೈರ್ಯವಿದ್ದರೆ ಚರ್ಚೆಗೆ ಬನ್ನಿ. ಸರ್ಕಾರ ಆಡಳಿತದ ಯಾವುದೇ ವಿಷಯದ ಕುರಿತು, ಯಾವುದೇ ಸಮಯ, ಯಾವುದೇ ಸ್ಥಳದಲ್ಲಿ ಬೇಕಾದರೂ ಚರ್ಚಿಸುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಸ್ಮೃತಿ ಇರಾನಿ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆಗೆ ಅಧ್ಯಕ್ಷ ರೋಜಿ ಎಂ ಜಾನ್, ರಾಹುಲ್ ಗಾಂಧಿ ಅವರು ಚರ್ಚೆಗೆ ಸಿದ್ಧರಿದ್ದಾರೆ. ನಾನೊಬ್ಬ ವಿದ್ಯಾರ್ಥಿಯ ಸಂಘಟನೆಯ ಸದಸ್ಯನಾಗಿ ಕೇಳಲು ಇಚ್ಚಿಸುತ್ತೇನೆ, ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆ ಕಾರ್ಯಕರ್ತರು ನಿಮಗೆ ಗೂಂಡಾಗಳ ಹಾಗೆ ಕಾಣುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಚಟುವಟಿಕೆಗಳ ಕುರಿತಂತೆ ಏನು ತಿಳಿಯದವರಷ್ಟೇ ನಿಮ್ಮನ್ನು ಇಷ್ಟಪಡುತ್ತಾರೆ. ವಿದ್ಯಾರ್ಥಿಗಳು ಹಾಗೂ ಯುವಕರ ಬಲದಿಂದಲೇ ಭಾರತ ಸ್ವತಂತ್ರ್ಯ ರಾಷ್ಟ್ರವಾಗಿ ಹೊರ ಬರಲು ಸಾಧ್ಯವಾಗಿದ್ದು ಎಂಬುದನ್ನು ಯಾರು ಮರೆಯಬಾರದು. ಇಂತಹ ವಿದ್ಯಾರ್ಥಿ ಸಂಘಟನೆಗಳನ್ನೇ ಸ್ಮೃತಿ ಇರಾನಿಯವರು ಗೂಂಡಾಗಳೆಂದು ಕರೆಯುತ್ತಿದ್ದಾರೆ. ಕೇಂದ್ರ ಸಚಿವೆ ಅವರ ಈ ಹೇಳಿಕೆಯಿಂದ ವಿದ್ಯಾರ್ಥಿ ಸಂಘಟನೆಗಳಿಗೆ ಅವಮಾನವಾಗಿದ್ದು, ತಮ್ಮ ಈ ಹೇಳಿಕೆಗೆ ಕೂಡಲೇ ಸ್ಮೃತಿ ಇರಾನಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ