ಅರುಣಾ ಶಾನುಭಾಗ್ ಅತ್ಯಾಚಾರದ ಅಪರಾಧಿ ಈಗ ಕೂಲಿಯಾಳು!

ಅರುಣಾಳ ಘಟನೆಯೇ ಎಲ್ಲದಕ್ಕೂ ಕಾರಣ. ನನಗೆ ನನ್ನ ತಪ್ಪಿನ ಅರಿವಾಗಿದೆ. ಅರುಣಾ ದೀದಿಜಿ ಮತ್ತು ಆ ದೇವರು ನನಗೆ ಕ್ಷಮೆ ನೀಡಲಿ...
ಅರುಣಾಶಾನುಬಾಗ್
ಅರುಣಾಶಾನುಬಾಗ್

42 ವರ್ಷಗಳ ಕಾಲ ಜೀವಚ್ಛವವಾಗಿದ್ದ ನರಳಿ ಸಾವನ್ನಪ್ಪಿದ ದಾದಿ ಅರುಣಾಶಾನುಬಾಗ್, ಆಕೆಯನ್ನು ಈ ಸ್ಥಿತಿಗೆ ತಳ್ಳಿದ, ಅಪರಾಧಿ ಸೋಹನ್‌ಲಾಲ್ ವಾಲ್ಮೀಕಿ ಖ್ಯಾತ ಪತ್ರಿಕೆಯೊಂದರ ಪ್ರತಿನಿಧಿಯ ಜತೆ ಮಾತನಾಡಿದ್ದಾನೆ. ಅರುಣಾಳ ಸ್ಥಿತಿಗೆ ಕಾರಣನಾದ ಈತ 7 ವರ್ಷ ಜೈಲು ಶಿಕ್ಷೆ ಅನುಭವಿಸಿ, ಈಗ ಉತ್ತರಪ್ರದೇಶದ ಪರ್‌ಪಾ ಗ್ರಾಮದಲ್ಲಿ  ಹೆಂಡತಿ, ಮೂವರು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾನೆ.

ವಾಲ್ಮೀಕಿ ಮಾಧ್ಯಮದವರೊಂದಿಗೆ ಹಂಚಿಕೊಂಡ ಸಂಗತಿಗಳನ್ನು ಅವನ ಮಾತುಗಳಲ್ಲಿಯೇ ಕೇಳಿ...

ನಾನೀಗ ಮಾಂಸಾಹಾರವನ್ನೇ ಬಿಟ್ಟು ಬಿಟ್ಟಿದ್ದೇನೆ. ಸಿಗರೇಟ್, ಬೀಡಿ ಸೇದುವ ಚಟಗಳಾಗಲೀ, ಕುಡಿತ ಯಾವೂದೂ ಇಲ್ಲ. ನನಗೆ ಶಿಕ್ಷೆಯಾಗುವ ಮುನ್ನ ನನಗೊಬ್ಬಳು ಮಗಳು ಹುಟ್ಟಿದ್ದಳು. ನಾನು ಜೈಲಿನಲ್ಲಿದ್ದಾಗ ಅವಳು ತೀರಿಕೊಂಡಳು. ನಾನು ತಪ್ಪು ಮಾಡಿದ ಕಾರಣದಿಂದಲೇ ಅವಳಿಗೆ ಸಾವು ಸಂಭವಿಸಿದೆ. ನಾನು ಜೈಲಿನಿಂದ ಬಿಡುಗಡೆಯಾಗಿ ಹಲವಾರು ವರ್ಷಗಳ ಕಾಲ ನಾನು ಹೆಂಡತಿಯನ್ನು ಮುಟ್ಟಲೇ ಇಲ್ಲ. ನಾನು ಜೈಲಿನಿಂದ ಬಂದು 14 ವರ್ಷಗಳ ನಂತರ ನನಗೆ ಮಗ ಹುಟ್ಟಿದ್ದು.

ಅರುಣಾಳ ಘಟನೆಯೇ ಎಲ್ಲದಕ್ಕೂ ಕಾರಣ. ನನಗೆ ನನ್ನ ತಪ್ಪಿನ ಅರಿವಾಗಿದೆ. ಅರುಣಾ ದೀದಿಜಿ ಮತ್ತು ಆ ದೇವರು ನನಗೆ ಕ್ಷಮೆ ನೀಡಲಿ.

1974, ನವೆಂಬರ್ 27 ರಾತ್ರಿ  ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅಲ್ಲಿನ ಕೆಲಸದವನಾಗಿದ್ದ ವಾಲ್ಮೀಕಿ, ಅದೇ ಆಸ್ಪತ್ರೆಯಲ್ಲಿ ದಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರುಣಾಳನ್ನು ನಾಯಿಯ ಸಂಕೋಲೆಯಿಂದ ಬಿಗಿದು ಅತ್ಯಾಚಾರವೆಸಗಿದ್ದನು. ಆ ಆಘಾತದಿಂದ ಅರುಣಾ ಮತ್ತೆ ಮೇಲೇಳಲೇ ಇಲ್ಲ. ಜೀವದ ಸೆಲೆಯೊಂದು ಮಾತ್ರ ಆಕೆಯ ದೇಹದಲ್ಲಿತ್ತು. ಜೀವಚ್ಛವವಾಗಿ ಮಲಗಿದ್ದ ಅರುಣಾಳಿಗೆ ದಯಾಮರಣ ಕಲ್ಪಿಸಬೇಕೆಂದು ಹೋರಾಟ ಮಾಡಿದ್ದರೂ, ಅದಕ್ಕೆ ಒಪ್ಪಿಗೆ ಸಿಗಲಿಲ್ಲ.

ನಾನು ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟವನು ರಾತ್ರಿ 8 ಗಂಟೆಗೆ ವಾಪಸ್ ಬರುತ್ತೇನೆ. ದಿನವೊಂದಕ್ಕೆ ನನಗೆ ರು. 261 ಸಂಬಳ ಸಿಗುತ್ತದೆ. ಸೈಕಲ್ ತುಳಿಯುತ್ತಾ ನಾನು 25 ಕಿ.ಮೀ ಕ್ರಮಿಸಿ ಕೆಲಸಕ್ಕೆ ಹೋಗುತ್ತೇನೆ. ಪತ್ರಿಕೆ ಓದಲು ಇನ್ನೆಲ್ಲಿದೆ ಸಮಯ?

ವಾಲ್ಮೀಕಿಯ ಗಂಡು ಮಕ್ಕಳಿಬ್ಬರೂ ಕೂಲಿ ಕಾರ್ಮಿಕರೇ. ದಿನಕ್ಕೆ 200 -300 ರು. ದುಡಿಯುತ್ತಾರೆ ಇವರು.

ತಾನು ಶಿಕ್ಷೆ ಮುಗಿಸಿದ ನಂತರ ಕೆಇಎಂ ಆಸ್ಪತ್ರೆಗೆ ವಾಪಾಸ್ ಆಗಿದ್ದೆ ಎಂಬ ಸುದ್ದಿಯನ್ನು ವಾಲ್ಮೀಕಿ ನಿರಾಕರಿಸಿದ್ದಾರೆ. ನನ್ನ ಮಗ ಪತ್ರಿಕೆಯಲ್ಲಿ ಸುದ್ದಿಯಾಗಿದ್ದನ್ನು ಹೇಳಿದ್ದ. ನಾನು ಶಾನುಬಾಗ್‌ನ್ನು ಕೊಲೆ ಮಾಡಲು ಯತ್ನಿಸಿದ್ದೆನಂತೆ... ಈ ಘಟನೆಯಾದ ನಂತರ 10 ವರ್ಷಗಳಲ್ಲಿ ನಾನು ನಿದ್ದೆ ಮಾಡಿದ್ದೇ ಕಡಿಮೆ. ಹೀಗಿರುವಾಗ ಅದು ಹೇಗೆ ನಾನು ಅದೇ ಆಸ್ಪತ್ರೆಗೆ ಮರಳಲಿ? ಅಲ್ಲಿ ಹೋಗಿ ಅರುಣಾಳನ್ನು ಹೇಗೆ ನೋಡಲಿ?

ನಾನ್ಯಾವುದೋ ಮಾರಕ ರೋಗಕ್ಕೆ ತುತ್ತಾಗಿ ಸತ್ತಿದ್ದೆನಂತೆ. ಇದನ್ನು ಕೇಳಿದರೆ ನನ್ನ ಮಡದಿ ಅಳುವಳು. ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಕ್ಕಳು ನನ್ನ ಹೆಂಡತಿಯನ್ನು ನೋಡಿಕೊಳ್ಳುತ್ತಿದ್ದರು. ನನಗೆ ಹಳೆಯ ನೆನಪುಗಳಲ್ಲಿ ಬದುಕಿ ಸಾಕಾಗಿದೆ. ನನಗೀಗ ಸಾಯಬೇಕು ಎಂದು ಅನಿಸುತ್ತಿದೆ.

ಆ ಉದ್ವೇಗದಲ್ಲಿ ಎಲ್ಲವೂ ನಡೆದು ಹೋಯ್ತು. ಅಲ್ಲೊಂದು ಜಗಳ ಆಗಿತ್ತು, ಅದು ಕತ್ತಲೆ, ನಾನು ತುಂಬಾನೇ ಭಯಭೀತನಾಗಿದ್ದೆ.  ನಾವು ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದೆವು.ಹಾಗೆ ಹೊಡೆದಾಡುವಾಗ ಆಕೆಯ ಆಭರಣ ಕಿತ್ತು ಬಂದಿತ್ತು. ಅದನ್ನೇ ಅವರು ನಾನು ಕಳ್ಳತನ ಮಾಡಿದ್ದು ಎಂದು ಹೇಳಿತ್ತು. ನಾನು ಅತ್ಯಾಚಾರ ಮಾಡಿಲ್ಲ. ಪೊಲೀಸರು ನನಗೆ ಜೈಲಿನಲ್ಲಿ ಚೆನ್ನಾಗಿ ಥಳಿಸಿ ಅತ್ಯಾಚಾರ ಮಾಡಿದ್ದೇನೆ ಅಂತ ಒಪ್ಪಿಕೋ ಎಂದು ಹೇಳಿದರು. ನಾನು ಆಕೆಯನ್ನು ಅತ್ಯಾಚಾರ ಮಾಡಿಲ್ಲ. ಬೇರೆ ಯಾರೋ ಮಾಡಿರಬೇಕು.

ಹೋ...ನನಗೇನೂ ನೆನಪಿಲ್ಲ.

ಅರುಣಾ ದೀದಿಜಿ ಯಾವತ್ತೂ ನನ್ನೊಂದಿಗೆ ಜಗಳ ಆಡುತ್ತಿದ್ದರು. ನನಗೆ ನಾಯಿಗಳೆಂದರೆ ಭಯ ಎಂಬುದು ಆಕೆಗೆ ಗೊತ್ತಿತ್ತು. ಅಲ್ಲಿ ತುಂಬಾ ಜನ ಕಸ ಗುಡಿಸುವ ಆಳುಗಳಿದ್ದರು. ಆದರೆ ಆಕೆ ಯಾವತ್ತೂ ನಾಯಿಗಳಿಗೆ ಆಹಾರ ಕೊಡಲು ಅವುಗಳ ಗೂಡು ಸ್ವಚ್ಛ ಮಾಡಲು ನನ್ನನ್ನೇ ನೇಮಿಸುತ್ತಿದ್ದಳು.

ನನಗೆ ಈ ಕೆಲಸ ಬೇಡ, ನನ್ನನ್ನು ಬೇರೆ ಕಡೆ ವರ್ಗಾವಣೆ ಮಾಡಿ ಎಂದು ನಾನು ನನ್ನ ಹಿರಿಯ ಅಧಿಕಾರಿಗಳಲ್ಲಿ ವಿನಂತಿಸಿದ್ದೆ. ಯಾರೂ ನನ್ನ ಮಾತು ಕೇಳಲೇ ಇಲ್ಲ. ನಮ್ಮಂತ ಕಸ ಗುಡಿಸುವವರ ಮಾತು ಯಾರು ಕೇಳ್ತಾರೆ?

ಆ ದಿನ ಎಲ್ಲವೂ ನಾಶವಾಗಿ ಹೋಯ್ತು.

ನಾನು ಆ ದಿನ ರಜೆ ಕೇಳುವ ಸಲುವಾಗಿ ಅರುಣಾ ದೀದಿಜಿ ಬಳಿ ಹೋಗಿದ್ದೆ. ನನ್ನ ಅತ್ತೆ, ಅಂದ್ರೆ ಹೆಂಡತಿಯ ಅಮ್ಮ  ಅನಾರೋಗ್ಯದಿಂದಿದ್ದರು. ಅವರನ್ನು ಭೇಟಿ ಮಾಡಲು ನನ್ನ ಹೆಂಡತಿ ತವರಿಗೆ ಹೋಗಬೇಕಿತ್ತು. ಆದರೆ ಅರುಣಾ ದೀದಿಜಿ ನನಗೆ ರಜೆ ನೀಡಲು ನಿರಾಕರಿಸಿದರು. ನೀನೆಲ್ಲಿಯಾದರೂ ರಜೆ ತೆಗೆದುಕೊಂಡು ಬಿಟ್ಟರೆ ನಾಯಿಯ ತಿಂಡಿ ಕದಿಯುತ್ತೇನೆ, ನಾನು ಕೆಲಸ ಮಾಡುವುದೇ ಇಲ್ಲ ಎಂದು ದೂರು ನೀಡುತ್ತೇನೆ ಎಂದು ಅರುಣಾ  ಹೆದರಿಸಿದ್ದರು.  
ನಾನು ಅಂಥಾ ಕೆಲಸವನ್ನೆಂದೂ ಮಾಡಿಲ್ಲ. ನನಗೆ ನಾಯಿಗಳೆಂದರೆ ಭಯ. ಹೀಗಿರುವಾಗ ನಾನು ನಾಯಿಗಳ ತಿಂಡಿಯನ್ನು ಹೇಗೆ ಕದಿಯಲು ಸಾಧ್ಯ? ಡ್ಯೂಟಿ ಸಮಯದಲ್ಲಿ ಅರುಣಾ ದೀದಿಜಿ ವಾರ್ಡ್ ಬಾಯ್ಸ್ ಜತೆ ಇತರ ನರ್ಸ್ ಜತೆ ಕಾರ್ಡ್ಸ್ ಆಡುವುದನ್ನು ನಾನು ನೋಡಿದ್ದೇನೆ. ನನಗೆ ರಜೆ ನೀಡಲು ನಿರಾಕರಿಸಿದ್ದು ಮಾತ್ರವಲ್ಲದೆ ನನಗೆ ಬೆದರಿಕೆಯನ್ನೊಡ್ಡಿದಾಗ ನಾನು ಈ ವಿಷಯವನ್ನೆಲ್ಲಾ ಮೇಲಾಧಿಕಾರಿಗಳಿಗೆ ಹೇಳುತ್ತೇನೆಂದು ನಾನು ಬೆದರಿಸಿದೆ. ಆಮೇಲೆ ನಮ್ಮ ನಡುವೆ ಜಗಳ ನಡೆಯಿತು. ಆ ಕೋಪದಲ್ಲಿ ನಾನೇನು ಮಾಡಿದೆ ಎಂಬುದು ನನಗೇ ಗೊತ್ತಿಲ್ಲ.

4 ವರ್ಷಗಳ ಹಿಂದೆ ಅರುಣಾ ಅವರ ದಯಾಮರಣ ಅರ್ಜಿ ತಿರಸ್ಕೃತಗೊಂಡಿರುವುದರ ಬಗ್ಗೆ ನನ್ನ ಹಿರಿಯ ಮಗ ಕಿಶನ್ ಹೇಳಿದ್ದ.

ಆಮೇಲೆ ಮಾತನಾಡಿದ್ದು ಕಿಶನ್

ನನ್ನ ಅಪ್ಪ ದಿನಕ್ಕೆ ಎರಡು ಬಾರಿ ಪ್ರಾರ್ಥಿಸುತ್ತಾರೆ, ನಾನು ದಯಾಮರಣದ ಬಗ್ಗೆ ಹೇಳಿದಾಗಿನಿಂದ ಅವರು ದಿನಕ್ಕೆ ಐದಾರು ಬಾರಿ ಪ್ರಾರ್ಥಿಸತೊಡಗಿದರು. ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಳಿದಾಗ ಅಪ್ಪ ನಡುಗಿ ಬಿಟ್ಟಿದ್ದರು. ಆಮೇಲೆ ಅದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ ಎಂದು ಹೇಳಿದಾಗ ಅವರು ಸುಧಾರಿಸಿಕೊಂಡರು.

ಈ ಪ್ರಕರಣದ ಬಗ್ಗೆ ಅವರು ತುಂಬಾ ಮಾತನಾಡುವುದಿಲ್ಲ. ಈ ಬಗ್ಗೆ ಅವರಲ್ಲಿ ನಾನು ಕೇಳುವುದೂ ಸರಿ ಅನಿಸುವುದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಅಪ್ಪ ಇನ್ನೊಂದು ಹೆಣ್ಣಿನ ಜತೆ ಏನು ಮಾಡಿದ ಎಂದು ಕೇಳುವುದು ಸರಿಯಲ್ಲ. ಆದರೆ ನನ್ನ ಮಾವಂದಿರು ಅಪ್ಪ ನಮ್ಮ ಜೀವನವನ್ನು ಹೇಗೆ ಹಾಳು ಮಾಡಿದ ಎಂದು ಹೇಳಿದ್ದಾರೆ. ನಾವು ಮುಂಬೈನಲ್ಲೇ ಜೀವನ ನಡೆಸಬೇಕಿತ್ತು.

ನನಗೆ 12 ವರ್ಷವಿರುವಾಗ ಅಮ್ಮ ಈ ಪ್ರಕರಣದ ಬಗ್ಗೆ ಹೇಳಿದ್ದರು ಅಂತಾನೆ ಕಿರಿಯ ಮಗ ರವೀಂದ್ರ.  ನಾನು ನನ್ನ ಅಪ್ಪನನ್ನು ಕ್ಷಮಿಸಬೇಕು ಎಂದು ಅಮ್ಮ ನನ್ನಲ್ಲಿ ಹೇಳಿದ್ದಳು.  ನನ್ನ ಅಣ್ಣ ಅಪ್ಪನ ಮೇಲೆ ಕೋಪಗೊಂಡಿದ್ದಾನೆ, ಆದ್ದರಿಂದ ನಾನು ಅಪ್ಪನ ಮೇಲೆ ಪ್ರೀತಿ ತೋರಿಸಬೇಕೆಂದು ಅಮ್ಮ ಹೇಳಿದ್ದಳು. ಅಪ್ಪ  ನನ್ನನ್ನು ಶಾಲೆಗೆ ಕಳುಹಿಸಲೇ ಇಲ್ಲ. ನನಗೆ ನನ್ನ ಹೆಸರನ್ನು ಬರೆಯಲು ಕೂಡಾ ಗೊತ್ತಿಲ್ಲ. ಹೀಗಿರುವಾಗ ನಾನು ಅಪ್ಪನನ್ನು ಹೇಗೆ ಕ್ಷಮಿಸಲಿ? ಎಂದು ಪ್ರಶ್ನಿಸುತ್ತಾನೆ.

ಇಷ್ಟು ವರ್ಷ ಎಲ್ಲಿದ್ದ ಈತ?


ವಾಲ್ಮೀಕಿ, ಅರುಣಾ ಮೇಲೆರಗಿ ದರೋಡೆ ಮತ್ತು ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರರಲ್ಲಿ ದೂರು ನೀಡಲಾಗಿತ್ತು. ಪೊಲೀಸ್ ದೂರು ಪ್ರಕಾರ ಅದರಲ್ಲಿ ವಾಲ್ಮೀಕಿ ಅತ್ಯಾಚಾರವೆಸಗಿರುವುದರ ಬಗ್ಗೆ ಉಲ್ಲೇಖವಿಲ್ಲ. ವಾಲ್ಮೀಕಿ 7 ವರ್ಷಗಳ ಕಾಲ ಪುಣೆಯ ಯೆರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಆಮೇಲೆ ನಾಪತ್ತೆಯಾಗಿದ್ದನು.

ಕೆಲವೊಂದು ವರದಿಗಳಲ್ಲಿ ವಾಲ್ಮೀಕಿ ಕೆಇಎಂ ಆಸ್ಪತ್ರೆ ಗೆ ವಾಪಸ್ ಬಂದು ಅಲ್ಲಿಂದ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಲು ಹೋಗಿದ್ದನು. ಅಲ್ಲಿ ಆತ ಕ್ಷಯ ಅಥವಾ ಏಡ್ಸ್‌ಗೆ ತುತ್ತಾಗಿ ಸಾವನ್ನಪ್ಪಿದ್ದನು ಎಂದು ಎಂದು ಹೇಳಲಾಗಿತ್ತು. ಇದಿಷ್ಟು ವರ್ಷ ಆತ ಗಾಜಿಯಾಬಾದ್‌ನಿಂದ 60 ಕಿಮೀ ದೂರವಿರುವ ತನ್ನ ಹಿರೀಕರ ಮನೆಯನೆ  ವಾಸವಾಗಿದ್ದನು.

ದೈನಂದಿನ ಬದುಕು ಸಾಗಿಸುವುದಕ್ಕಾಗಿ ಈತ ಕೂಲಿ ಕೆಲಸ ಮಾಡುತ್ತಿದ್ದ. ಈತನಿಗೆ ವಯಸ್ಸೆಷ್ಟಾಯಿತು ಅಂದ್ರೆ 66 ಅಂತ ಹೇಳ್ತಾನೆ. ಆದ್ರೆ ಮಗ ಅಪ್ಪನ ವಯಸ್ಸು 72 ಅಂತಾನೆ. ಈತ ಈಗಲೂ  ನ್‌ಟಿಪಿಸಿ ಪವರ್ ಪ್ಲಾಂಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ.

ಕೊರಳಲ್ಲಿ ರುದ್ರಾಕ್ಷಿ ಹಾರ ಮತ್ತು ಪರ್ಸ್‌ನಲ್ಲಿ ತನ್ನ ಗುರುಗಳ ಫೋಟೋ ಇಟ್ಟುಕೊಂಡಿರುವ ಈತನಿಗೆ ಮರಾಠಿ ಪತ್ರಿಕೆ ಸತ್ಕಾಲ್ ಟೈಮ್ಸ್‌ನ ಪತ್ರಕರ್ತನೊಬ್ಬ ಅರುಣಾಳ ಸಾವಿನ ಬಗ್ಗೆ ಹೇಳಿದ್ದನಂತೆ. ಈತನ ಮನೆಯಲ್ಲಿರುವ ಟೀವಿ ವರ್ಕ್ ಆಗ್ತಿಲ್ಲ. ಈ ಊರಲ್ಲಿ ಒಂದು ವಾರದಿಂದ ಕರೆಂಟ್ ಇಲ್ಲ, ಈತನ ಕುಟುಂಬ ಪತ್ರಿಕೆಗಳನ್ನೇ ಓದುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com