
ನವದೆಹಲಿ: 60 ವರ್ಷಗಳಿಂದ ಭಾರತದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದೂರ ದೃಷ್ಟಿಯಿಲ್ಲದ ನೀತಿಗಳನ್ನು ಜಾರಿ ಮಾಡಿ ಭಾರತದಲ್ಲಿ ಬಡತನ ನೆಲೆಯೂರುವಂತೆ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗಳ ಕುರಿತಂತೆ ಇಂದು ನವದೆಹಲಿಯಲ್ಲಿ ಕಿಡಿಕಾರಿರುವ ಅವರು, 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೂರ ದೃಷ್ಟಿಯಿಲ್ಲದ ನೀತಿಗಳನ್ನು ಜಾರಿಗೆ ತಂದು ಇಂದಿಗೂ ಭಾರತದಲ್ಲಿ ಬಡತನವೆಂಬ ಪಿಡುಗು ನೆಲೆಯೂರುವಂತೆ ಮಾಡಿದೆ. ಬಡತನ ನಿರ್ಮೂಲನೆ ಮಾಡುವುದು ಇಂದಿಗೂ ಸವಾಲಿನ ಕೆಲಸವಾಗಿದೆ. ಸೂಟ್ ಕೇಸ್ ತೆಗೆದುಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕಿಂತ ಸೂಟುಬೂಟು ಹಾಕುತ್ತಿರುವ ನಮ್ಮ ಸರ್ಕಾರವೆಷ್ಟೋ ಲೇಸು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಬಡ ಜನರ ಪರವಾಗಿದೆ ಎಂದು ಹೇಳುತ್ತಿದೆ. ಕಾಂಗ್ರೆಸ್ ಬಡಜನರ ಪಕ್ಷವಾಗಿದ್ದೇ ಆದರೆ, ಇಂದಿಗೂ ಭಾರತದಲ್ಲಿ ಬಡತನವೇಕೆ ತಾಂಡವವಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಆಡಳಿತದಲ್ಲಿ ಭಾರತಕ್ಕೆ ಕಲ್ಲಿದ್ದಲು ಹಗರಣ ಹಾಗೂ 2ಜಿ ಹಗರಣದಂತಹ ಬಹುದೊಡ್ಡ ಅತ್ಯಮೂಲ್ಯ ಉಡುಗೊರೆಗಳನ್ನು ನೀಡಿದೆ. ಇದನ್ನು ಜನ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸೇನೆಯಿಂದ ನಿವೃತ್ತಿ ಹೊಂದಿರುವವರಿಗೆ ಸಮಾನ ಶ್ರೇಣಿ ಹಾಗೂ ಸಮಾನ ವೇತನ ಯೋಜನೆ ಕುರಿತಂತೆ ಕಾಂಗ್ರೆಸ್ ಟೀಕೆಗಳ ವಿರುದ್ಧ ಕಿಡಿಕಾರಿರುವ ಮೋದಿ ಅವರು, ಸಮಾನ ವೇತನ ಹಾಗೂ ಸಮಾನ ಶ್ರೇಣಿ ಕುರಿತಂತೆ ಟೀಕೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಕ್ಕಿಲ್ಲ. ಸೇನೆಯಿಂದ ನಿವೃತ್ತಿಯಾದವರು ಕಳೆದ 57 ವರ್ಷಗಳಿಂದ ಸಮಾನ ವೇತನ, ಸಮಾನ ಶ್ರೇಣಿಗಾಗಿ ಒತ್ತಾಯಿಸುತ್ತಿದ್ದರು. ಆದರೆ, ಆಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇಂದು ನಿವೃತ್ತ ಸೇನಾಧಿಕಾರಿಗಳಗೆ ಸೇವೆಗಳನ್ನು ಒದಗಿಸುತ್ತಿರುವ ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
Advertisement