
ನವದೆಹಲಿ: ದೇಶದ ಬಡಜನರ ಶಕ್ತಿ ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಲೇ ಇದ್ದು, ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಆಕಾಶವಾಣಿಯಲ್ಲಿ 8ನೇಬಾರಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಬಡಜನರಿಗಾಗಿ ಕೆಲಸ ಮಾಡಬೇಕೆಂಬ ತುಡಿತ ನನ್ನ ಮನಸ್ಸಿನಲ್ಲಿತ್ತು. ಇಂದಿಗೂ ಈ ಬಗ್ಗೆ ಆಲೋಚನೆ ನಡೆಸುತ್ತಲೇ ಇದ್ದೇನೆ. ಬಡಜನರ ಅನುಕೂಲ ಹಾಗೂ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿ ಒಂದು ವರ್ಷ ಕಳೆದಿದೆ. ರೈತರ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೃಷಿ ಕ್ಷೇತ್ರದಲ್ಲಿ ಆಧುನೀಕರಣದ ಅಗತ್ಯವಿದೆ. ಒಂದು ವರ್ಷ ನಂತರವೂ ಸರ್ಕಾರದ ಮೇಲಿನ ಜನರ ವಿಶ್ವಾಸ ಎಳ್ಳಷ್ಟೂ ಕುಂದಿಲ್ಲ. ಅಟಲ್ ಪಿಂಚಣಿ ಯೋಜನೆ, ಸ್ವಾಸ್ಥ್ಯ ಭೀಮಾ ಯೋಜನೆ, ಸಾಮಾಜಿಕ ಸುರಕ್ಷಾದಂತಹ ಸರ್ಕಾರದ ಯೋಜನೆಗಳಿಂದ ಈಗಾಗಲೇ 8 ಕೋಟಿ ಜನರಿಗೂ ಅಧಿಕ ಜನ ಲಾಭ ಪಡೆಸಿದ್ದಾರೆ.
ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಜನತೆ ಸಲಹೆ ಹಾಗೂ ಅಭಿಪ್ರಾಯಗಳನ್ನು ಸ್ವೀಕರಿಸಲು ಸಿದ್ದನಿದ್ದೇನೆ. ರೈತರಿಗೆ ಸಹಾಯವಾಗಲೆಂದು ಸರ್ಕಾರ ಈಗಾಗಲೇ ಕಿಸಾನ್ ವಾಹಿನಿಯನ್ನು ಪ್ರಸ್ತುತಪಡಿಸಿದ್ದು, ಇದರಿಂದ ರೈತರಿಗೆ ಹಾಗೂ ಕೃಷಿಕರಿಗೆ ಬಹಳ ಅನುಕೂಲವಾಗಿದೆ ಎಂದಿದ್ದಾರೆ.
ಸಮಾನ ದರ್ಜೆ, ಸಮಾನ ಪಿಂಚಣಿ ಜಾರಿ ಬಗ್ಗೆ ಮಾತನಾಡಿರುವ ಅವರು, ಪಿಂಚಣಿ ಯೋಜನೆ ಸ್ವಲ್ಪ ಸಂಕೀರ್ಣವಾಗಿದೆ. ಈ ಕುರಿತಂತೆ ಸ್ವಲ್ಪ ಸಮಯ ನೀಡಿ. ಖಂಡಿತವಾಗಿಯೂ ಯೋಜನೆಯನ್ನು ಯಶಸ್ವಿಗೊಳಿಸುತ್ತೇನೆ. ಯೋಜನೆ ಯಶಸ್ವಿಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಹಿಮಾಲಯದ ಸೌಂದರ್ಯದ ಕುರಿತಂತೆ ಹಲವರಿಂದ ವರ್ಣಿನೆಗಳು ಕೇಳಿಬಂದಿದ್ದು, ಹಿಮಾಲಯದ ಪ್ರವಾಸಕ್ಕೆ ಹೆಚ್ಚೆಚ್ಚು ಜನ ಬರುವುದರಿಂದ ಭಾರತದ ಪ್ರಖ್ಯಾತಿ ಮತ್ತಷ್ಟು ಹೆಚ್ಚುತ್ತದೆ ಹಾಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವಂತೆ ಮೋದಿ ಸಲಹೆ ನೀಡಿದರು.
ಇದೇ ವೇಳೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾಗಿರುವ ಕುರಿತಂತೆ ಮಾತನಾಡಿರುವ ಅವರು, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಶ್ರಮಪಟ್ಟು ಉತ್ತಮ ಸಾಧನೆ ಮಾಡಿದ್ದಾರೆ. ಉತ್ತೀರ್ಣರಾದವರು ಮುಂದಿನ ಹೆಜ್ಜೆಯಿಡಲು ಗೊಂದಲಗಳನ್ನು ಸೃಷ್ಟಿಮಾಡಿಕೊಳ್ಳದೆ, ಒತ್ತಡದಿಂದ ನಿರ್ಧಾರ ಕೈಗೊಳ್ಳುವ ಬದಲು ನಿಮಗಿಷ್ಟವಾಗುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಮುನ್ನಡೆ ಸಾಧಿಸಿರಿ. ಅನುತ್ತೀರ್ಣರಾದ ವಿದ್ಯಾರ್ಥಿಗಳು ದುಡುಕಿನ ನಿರ್ಧಾರವನ್ನು ಕೈಗೊಳ್ಳದೆ, ಮರಳಿ ತಮ್ಮ ಯತ್ನ ಮಾಡಿ ಸಾಧನೆಯ ಹಾದಿಯತ್ತ ಸಾಗಬೇಕು. ವಿದ್ಯಾರ್ಥಿಗಳ ಸಾಧನೆ ಮಟ್ಟ ಇದೇ ರೀತಿ ಏರುತ್ತಲೇ ಇರಬೇಕು. ಎಲ್ಲಾ ವಿದ್ಯಾರ್ಥಿಗಳು ಯೋಚಿಸಿ ಹೆಜ್ಜೆ ಇಡಬೇಕಿದ್ದು, ದೇಶ ಸೇವೆ ಮಾಡವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಬೇಸಿಗೆಯ ತಾಪಮಾನ ದೇಶಾದಾದ್ಯಂತ ಹೆಚ್ಚಾಗಿದ್ದು, ಬೇಸಿಗೆಯಿಂದ ದೇಶದ ಜನತೆ ಕಂಗಾಲಾಗಿದ್ದಾರೆ. ಬೇಸಿಗೆಯಿಂದ ಸಾವಿರಾರು ಜನ ಈಗಾಗಲೇ ಪ್ರಾಣ ಕಳೆದುಕೊಂಡಿದ್ದು, ಮನುಷ್ಯರು ಮಾತ್ರವಲ್ಲದೆ, ಪ್ರಾಣಿ, ಪಕ್ಷಿ ಸಂಕುಲಗಳು ಕಂಗಾಲಾಗಿವೆ. ಹಾಗಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಕೊಡುವಂತೆ ದೇಶದ ಜನತೆಗೆ ಮೋದಿ ಸಲಹೆ ನೀಡಿದ್ದಾರೆ.
Advertisement