
ನವದೆಹಲಿ: ಸೋಮವಾರ ಹೋಟೆಲ್ ಊಟ, ಹೋಟೆಲ್ ವಾಸ್ತವ್ಯ, ಮೊಬೈಲ್ ಬಿಲ್, ವಿಮಾನ ಪ್ರಯಾಣ, ಕಲ್ಯಾಣ ಮಂಟಪದ ಬಾಡಿಗೆ, ಮದ್ಯ, ಸಿಗರೆಟ್ ಸೇರಿದಂತೆ ಇನ್ನಿತರೆ ತಂಬಾಕು ಉತ್ಪನ್ನ, ಬ್ಯೂಟಿ ಪಾರ್ಲರ್‌ನಲ್ಲಿ ಪಡೆಯುವ ಸೇವೆ ದುಬಾರಿಯಾಗಲಿವೆ.
ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ 2015-16ನೇ ಸಾಲಿನ ಸಾಮಾನ್ಯ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇವಾ ತೆರಿಗೆಯನ್ನು ಶೇ. 12.36ರಿಂದ ಶೇ.14ಕ್ಕೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಈ ಪರಿಷ್ಕೃತ ಸೇವಾ ತೆರಿಗೆ ಜೂ.1ರ ಸೋಮವಾರದಿಂದಲೇ ಜಾರಿಗೆ ಬರುತ್ತಿದೆ.
ಅದೇ ವೇಳೆ ಮ್ಯೂಚುವಲ್ ಫಂಡ್, ಚಿಟ್ ಫಂಡ್, ಇತರೆ ಬಿಲ್ ಪಾವತಿಗೂ ಸೋಮವಾರದಿಂದ ಶೇ.14ರ ಸೇವಾ ತೆರಿಗೆ ಅನ್ವಯವಾಗಲಿದೆ. ಇದರೊಂದಿಗೆ ಸಂಪೂರ್ಣ ನಿರ್ಮಾಣಗೊಂಡ ಸ್ಥಿತಿಯಲ್ಲಿ ಆಮದು ಮಾಡಿ ಕೊಳ್ಳುವ ವಾಣಿಜ್ಯ ಉದ್ದೇಶದ ವಾಹನ, ಸಿಮೆಂಟ್, ಲಘು ಪೇಯ, ಪ್ಯಾಕೇಜ್ ನೀರು, ಪ್ಲಾಸ್ಟಿಕ್ ಬ್ಯಾಗ್, , ಸಂಗೀತ ಕಚೇರಿ, ಅಮ್ಯೂಸ್‌ಮೆಂಟ್- ಥೀರ್ಮ್ ಪಾರ್ಕ್‌ಗೆ ನೀಡುವ ಭೇಟಿ ಶುಲ್ಕ ಕೂಡ ದುಬಾರಿಯಾಗಲಿದೆ.
ಇಲ್ಲಿಯವರೆಗೆ ವಿಮಾನ ಪ್ರಯಾಣ ಟಿಕೆಟ್‌ನ ಶೇ.40ರಷ್ಟು ದರಕ್ಕೆ ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ ಆ ಪ್ರಮಾಣವನ್ನು ಟಿಕೆಟ್‌ನ ಶೇ.60 ಮೌಲ್ಯಕ್ಕೆ ಹೆಚ್ಚಿಸಿರುವುದರಿಂದ ವಿಮಾನ ಪ್ರಯಾಣ ಟಿಕೆಟ್ ದರ ಕೂಡ ಹೆಚ್ಚಾಗಲಿದೆ.
ಆದಾಗ್ಯೂ, ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯ, ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮ ಹಾಗೂ ಹುಲಿ ಸಂರಕ್ಷಿತ ಅರಣ್ಯ ಭೇಟಿಯ ಸೇವಾ ತೆರಿಗೆಯಲ್ಲಿ ವಿನಾಯಿತಿ ನೀಡಿರುವುದರಿಂದ ಇಲ್ಲಿ ದುಡ್ಡು ಹೆಚ್ಚು ಖರ್ಚಾಗಲ್ಲ
ವರಿಷ್ಠ ಪಿಂಚಣಿ ಬಿಮಾ ಯೋಜನೆ, ಆಂಬುಲೆನ್ಸ್, ಪ್ಯಾಕ್ ಮಾಡಿ ಮಾರಲಾಗುವ ಹಣ್ಣು ಮತ್ತು ತರಕಾರಿಗೂ ಈ ಸೇವಾ ತೆರಿಗೆ ಅನ್ವಯವಾಗಲ್ಲ.
ಒಂದು ಸಾವಿರ ರೂ. ಮೇಲ್ಪಟ್ಟ ಚರ್ಮದ ಚಪ್ಪಲಿ, ಸ್ಥಳೀಯವಾಗಿ ತಯಾರಿಸಲ್ಪಟ್ಟ ಮೊಬೈಲ್‌ಗಳು, ಕಂಪ್ಯೂಟರ್ ಟಾಬ್ಲೆಟ್, ಮೈಕ್ರೋವೇವ್ ಓವೆನ್, ಶೇಂಗಾ ಚಟ್ನಿ, ಅಗರಬತ್ತಿಯನ್ನು ಸೇವಾ ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ದರ ಅಗ್ಗವಾಗಲಿದೆ.
Advertisement