ಆರ್ ಜೆಡಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಜಾರ್ಖಂಡ್ ಆರೋಗ್ಯ ಸಚಿವ

ತಮ್ಮ ವಿರುದ್ಧ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಮಾತಾನಾಡಿದ ಎಂಬ ಕಾರಣಕ್ಕೆ ಕೆಂಡಾಮಂಡಲವಾದ ಜಾರ್ಖಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಆವರು, ಆರ್ ಜೆಡಿ ಪಕ್ಷದ...
ಜಾರ್ಖಾಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ
ಜಾರ್ಖಾಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ

ಜಾರ್ಖಡ್: ತಮ್ಮ ವಿರುದ್ಧ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಮಾತಾನಾಡಿದ ಎಂಬ ಕಾರಣಕ್ಕೆ ಕೆಂಡಾಮಂಡಲವಾದ ಜಾರ್ಖಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಆವರು, ಆರ್ ಜೆಡಿ ಪಕ್ಷದ ನಾಯಕನೊಬ್ಬನ ಮೇಲೆ ಮನಬಂದಂತೆ ಥಳಿಸಿರುವ ಘಟನೆ ಬಿಶ್ರಾಂಪುರದಲ್ಲಿ ಭಾನುವಾರ ನಡೆದಿದೆ.

ಚಂದ್ರವಂಶಿ ಸಮಾಜ ಕುರಿತಂತೆ ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಆರ್ ಜೆಡಿ ನಾಯಕ ಆರೋಗ್ಯ ಸಚಿವರ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು. ರಾಜವಂಶಿ ಸಮಾಜದ ಜನರಿಗೆ ರಾಮಚಂದ್ರ ಚಂದ್ರವಂಶಿ ಅವರು ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ, ಜನರಿಗಾಗಿ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಹೇಳಿದ್ದರು.

ಆರ್ ಜೆಡಿ ನಾಯಕನ ಈ ಹೇಳಿಕೆಗೆ ಕೆಂಡಾಮಂಡಲವಾದ ಆರೋಗ್ಯ ಸಚಿವರು ಇದ್ದಕ್ಕಿದ್ದಂತೆ ಆರ್ ಜೆಡಿ ನಾಯಕನಿಗೆ ಮನಬಂದಂತೆ ಥಳಿಸಿದ್ದಾರೆ. ನಂತರ ಆರ್ ಜೆಡಿ ನಾಯಕನ ಭದ್ರತಾ ಸಿಬ್ಬಂದಿಯಾಗಿದ್ದ ಅಜಯ್ ವರ್ಮಾ ಎಂಬುವವರನ್ನು ಥಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಆರೋಗ್ಯ ಸಚಿವರ ಭದ್ರತಾ ಸಿಬ್ಬಂದಿಗಳು ಆರೋಗ್ಯ ಸಚಿವರನ್ನು ತಡೆದಿದ್ದಾರೆ. ಈ ದೃಶ್ಯ ಇದೀಗ ಅಂತರ್ಜಾಲದಲ್ಲಿ ಓಡಾಡುತ್ತಿದ್ದು, ಆರೋಗ್ಯ ಸಚಿವರ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗತೊಡಗಿದೆ.

ಘಟನೆ ನಂತರ ಆರ್ ಜೆಡಿ ನಾಯಕ ಪ್ರಕರಣ ದಾಖಲಿಸಿದ್ದು, ಇದಕ್ಕೆ ಪ್ರತಿಯಾಗಿ ಆರೋಗ್ಯ ಸಚಿವರ ಭದ್ರತಾ ಸಿಬ್ಬಂದಿ ಪಪ್ಪು ಕುಮಾರ್ ಎಂಬುವವರು ಸಹ ಆರ್ ಜೆಡಿ ನಾಯಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ಕುರಿತಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹಿರ್ದಾ ಲಾಲ್ ರವಿ ಅವರು ಹೇಳಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ರಾಮಚಂದ್ರ ಚಂದ್ರವಂಶಿ ಅವರು, ಆರೋಪವನ್ನು ತಳ್ಳಿಹಾಕಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಯಾರು, ಯಾವಾಗ, ಏನನ್ನೂ ಬೇಕಾದರೂ ಹೇಳುತ್ತಾರೆ. ನಾವು ಯಾರ ಮೇಲಾದರೂ ದೂರು ದಾಖಲಿಸಿದರೆ, ನಮ್ಮ ಮೇಲೂ ಮತ್ತೊಬ್ಬ ವ್ಯಕ್ತಿ ದೂರು ದಾಖಲಿಸುತ್ತಾನೆ. ಆರೋಪ ವ್ಯಕ್ತಪಡಿಸುತ್ತಿರುವ ಇಬ್ಬರು ವ್ಯಕ್ತಿಗಳು ಸುಮಾರು 9.30ರ ವೇಳೆಗೆ ಕಾರ್ಯಕ್ರಮಕ್ಕೆ ಬಂದು, ಕಾರ್ಯಕ್ರಮವನ್ನು ನಡೆಯಲು ಬಿಡುವುದಿಲ್ಲ ಎಂದು ಹೇಳಿದರು. ಹಾಗಾಗಿ ನನ್ನ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆಯಲು ಪ್ರಯತ್ನ ಮಾಡಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com