ಓಟಿಗಾಗಿ ನೋಟು: ಡಿಟಿಪಿ ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ
ಹೈದರಾಬಾದ್: ಮತಕ್ಕಾಗಿ ಲಂಚ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಶಾಸಕ ಎ.ರೇವಂತ್ ರೆಡ್ಡಿ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
5 ಕೋಟಿ ರುಪಾಯಿ ಲಂಚ ನೀಡುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ ರೇವಂತ್ ರೆಡ್ಡಿಯನ್ನು ಭಾನುವಾರ ಬಂಧಿಸಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರನ್ನು ರೇವಂತ್ ರೆಡ್ಡಿ ಹಾಗೂ ಆತನ ಇಬ್ಬರು ಆಪ್ತರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ ವೇಳೆ ಟಿಡಿಪಿ ಅಭ್ಯರ್ಥಿ ಪರ ಮತ ಹಾಕುವಂತೆ ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೆಫನ್ಸನ್ ಅವರಿಗೆ ಲಂಚ ನೀಡುವ ವೇಳೆ ಶಾಸಕ ಎ.ರೇವಂತ್ ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ರೇವಂತ್ ರೆಡ್ಡಿ ಅವರು ಎಲ್ವಿಸ್ ಆತ್ಮೀಯರೊಬ್ಬರನ್ನು ಸಂಪರ್ಕಿಸಿ ರು.50 ಲಕ್ಷ ಮುಂಗಡ ನೀಡುವುದಾಗಿ ತಿಳಿಸಿದ್ದರು. ಈ ಕುರಿತು ಎಲ್ವಿಸ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದರು.
ಮೊದಲೇ ನಿರ್ಧರಿಸಿದಂತೆ ರೇವಂತ್ ಅವರು ಲಾಲಾಗುಡಾದಲ್ಲಿರುವ ಎಲ್ವಿಸ್ ನಿವಾಸಕ್ಕೆ ತೆರಳಿ ಲಂಚ ನೀಡಲು ಪ್ರಯತ್ನಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದವರು ಶಾಸಕನನ್ನು ಹಣದ ಸಮೇತ ಬಂಧಿಸಿದ್ದಾರೆ. ವಿಧಾನಪರಿಷತ್ ಚುನಾವಣೆ ಇಂದು ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ