

ನವದೆಹಲಿ: ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಕರ್ನಾಟದ ಒಳನಾಡಿನಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೆ ಮುನ್ನುಡಿಯಂತೆ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನನಂತರ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಚೆನ್ನೈ, ಹೈದರಾಬಾದ್, ವಿಜಯನಗರ ಸೇರಿದಂತೆ ಹಲವು ನಗರಗಳಲ್ಲಿ ಮಳೆಯಾಗಿದೆ.
ಇದರಿಂದ ನಗರ ಪ್ರದೇಶಗಳಲ್ಲಿ ಜನಜೀವನಕ್ಕೆ ತೊಂದರೆಯಾಗಿದೆ. ಈಗಾಗಲೇ ಹಿಂಗಾರು ದಕ್ಷಿಣ ಭಾರತವನ್ನು ಪ್ರವೇಶಿಸಿದ್ದು, ನ.2 ಹಾಗೂ ನ.3ರಂದು ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ದಕ್ಷಿಣ ಕರ್ನಾಟಕದ ಒಳನಾಡು, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕರಾವಳಿ, ಪುದುಚೇರಿ, ಕೇರಳಗಳಲ್ಲಿ ಭಾರಿ ಮಳೆ ಬೀಳಲಿದ್ದು, ಉತ್ತರ ಕರ್ನಾಟಕದ ಒಳನಾಡು ಹಾಗೂ ತೆಲಂಗಾಣಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.