
ನವದೆಹಲಿ: ಎಂಟು ವರ್ಷದ ಬಾಲಕ ರೂಬೇನ್ ಪಾಲ್ ಅಂತರ್ಜಾಲದ ಭದ್ರತೆ ಕುರಿತ ಸಮ್ಮೇಳನದಲ್ಲಿ ಭಾಗವಹಿಸಿ ತನ್ನ ಜ್ಞಾನವನ್ನು ಸಭಿಕರ ಮುಂದೆ ಹರಿಬಿಟ್ಟು ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧಗೊಳಿಸಿದ್ದಾನೆ.
ಮೂರನೇ ತರಗತಿಯಲ್ಲಿ ಓದುತ್ತಿರುವ ರೂಬೇನ್ ಮಕ್ಕಳ ಸೈಬರ್ ಗೇಮ್‌ಗಳನ್ನು ಸಿದ್ಧಪಡಿಸುವ ಪ್ರೂಡೆಂಟ್ ಗೇಮ್ಸ್ ಎಂಬ ಕಂಪೆನಿಯ ಸಿಇಒ ಆಗಿದ್ದಾನೆ. ತಾನು ಒಂದೂವರೆ ವರ್ಷದವನಾಗಿದ್ದಾಗಲೇ ಕಂಪ್ಯೂಟರ್ ಭಾಷೆಗಳನ್ನು ಕಲಿಯಲಾರಂಭಿಸಿದೆ. ಈಗ ನನ್ನ ಪ್ರಾಜೆಕ್ಟ್ ಗಳನ್ನು ನಾನೇ ವಿನ್ಯಾಸಗೊಳಿಸುತ್ತೇನೆ ಎಂದು ಜಾಣನಂತೆ ಉತ್ತರಿಸುತ್ತಾನೆ.
ಭಾರತೀಯ ಮೂಲದ ಪ್ರಸ್ತುತ ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ವಾಸಿಸುತ್ತಿರುವ ರೂಬೆನ್ ನಿನ್ನೆ ದೆಹಲಿಯಲ್ಲಿ ಏರ್ಪಟ್ಟ ಸೈಬರ್ ಸೆಕ್ಯುರಿಟಿ ತಜ್ಞರ ಸಮಾವೇಶ "ಗ್ರೌಂಡ್ ಝೀರೋ ಸಮಿಟ್ 2015' ನಲ್ಲಿ ವಿಷಯತಜ್ಞ ಉಪನ್ಯಾಸಕನಾಗಿ ಭಾಷಣ ಮಾಡಿದ್ದ. ಅವನ ಮಾತು ಕೇಳಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ವಿಸ್ಮಯರಾದರು.
ರೂಬೇನ್ ತನ್ನ ಇಷ್ಟದ ಕಾಮಿಕ್ ಹೀರೊ ಸ್ಪೈಡರ್ ಮ್ಯಾನ್ ನನ್ನು ಉಲ್ಲೇಖಿಸಿ ಹ್ಯಾಕಿಂಗ್ ಮೂಲಕ ನಿಮಗೆ ವಿಶಿಷ್ಟವಾದ ಅಧಿಕಾರ ದೊರಕುತ್ತದೆ. ಅದರ ಜತೆಗೆ ನಿಮಗೆ ಅದಕ್ಕಿಂತಲೂ ಹಿರಿದಾದ ಜವಾಬ್ದಾರಿಯೂ ದೊರಕುತ್ತದೆ'.ಎನ್ನುತ್ತಾನೆ.
ಅಮೆರಿಕ ಮೂಲದ ವಿಜ್ ಕಿಡ್ ಎಂಬ ಸಂಸ್ಥೆ, ಇಂದಿನ ಯುಗದ ಮಕ್ಕಳು ಸೈಬರ್ ತಂತ್ರಜ್ಞಾನ, ಅದರ ಭದ್ರತೆ ಕುರಿತು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸೈಬರ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವಲ್ಲಿ ಕೆಲಸ ಮಾಡುತ್ತಿದೆ.ಅದರ ಸಮ್ಮೇಳನದಲ್ಲಿ ರೂಬೇನ್ ಭಾಗವಹಿಸಿದ್ದ.
Advertisement