
ನವದೆಹಲಿ: ಸಮಾನ ಪಿಂಚಣಿ, ಸಮಾನ ವೇತನ(ಒಆರ್‌ಒಪಿ) ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸೇನಾ ಪಡೆಗಳ ಹಿರಿಯರು, ನವೆಂಬರ್ 9 ಹಾಗೂ 10ರಂದು ತಮ್ಮ ಪದಕಗಳನ್ನು ಹಿಂದಿರುಗಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
'ದೇಶಾದ್ಯಂತ ನಮ್ಮ ಪದಕಗಳನ್ನು ವಾಪಸ್ ಮಾಡಲು ನಾವು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದು ಭಾರತೀಯ ಮಾಜಿ ಸೈನಿಕರ ಚಳವಳಿಯ ಪ್ರಧಾನ ಕಾರ್ಯದರ್ಶಿ, ಗ್ರೂಪ್ ಕ್ಯಾಪ್ಟನ್ ವಿ.ಕೆ.ಗಾಂಧಿ ಅವರು ಹೇಳಿದ್ದಾರೆ.
ಒಆರ್‌ಒಪಿ ಯೋಜನೆ ಜಾರಿಗಾಗಿ ಮಾಜಿ ಸೈನಿಕರು ಕಳೆದ 145 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 5ರಂದು ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದರೂ ಮಾಜಿ ಸೈನಿಕರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಸರ್ಕಾರ ಒಆರ್‌ಒಪಿ ಜಾರಿಗೊಳಿಸಲು ಒಪ್ಪಿದೆ. ಆದರೆ ಅದರಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ದೇಶಾದ್ಯಂತ ಎಲ್ಲಾ ಮಾಜಿ ಸೈನಿಕರು ನವೆಂಬರ್ 9 ಮತ್ತು 10ರಂದು ಶಿಸ್ತುಬದ್ಧವಾಗಿ ತಮ್ಮ ತಮ್ಮ ಜಿಲ್ಲಾಧಿಕಾರಿಗಳಿಗೆ ಪದಕಗಳನ್ನು ವಾಪಸ್ ನೀಡಿ ಪ್ರತಿಭಟಿಸಬೇಕು ಎಂದು ಗಾಂಧಿ ಕರೆ ನೀಡಿದ್ದಾರೆ.
Advertisement