
ನವದೆಹಲಿ: ಇಂಡಿಯಾ ಟುಡೇ ನಿಯತಕಾಲಿಕೆ ನಡೆಸುವ ವರ್ಷದ ಉತ್ತಮ ಮೊದಲ ಮೂರು ರಾಜ್ಯಗಳು ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಕಳೆದ ವರ್ಷ ನಮ್ಮ ರಾಜ್ಯ 9ನೇ ಸ್ಥಾನದಲ್ಲಿತ್ತು.ಈ ವರ್ಷ ಮೊದಲ ಸ್ಥಾನದಲ್ಲಿ ಗುಜರಾತ್ ಮತ್ತು ಎರಡನೇ ಸ್ಥಾನದಲ್ಲಿ ಕೇರಳ ರಾಜ್ಯಗಳಿವೆ.
ಸಮೀಕ್ಷೆ ವರದಿ ಸಿದ್ದಪಡಿಸುವಾಗ ಆಯಾ ರಾಜ್ಯಗಳ ಬಂಡವಾಳ ಹೂಡಿಕೆ, ಶಿಕ್ಷಣ, ಆಡಳಿತ, ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ, ಕೃಷಿ, ಆರೋಗ್ಯ, ಮೌಲಸೌಕರ್ಯ, ಆರ್ಥಿಕತೆ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆಯಾ ರಾಜ್ಯ ಸರ್ಕಾರಗಳ ದತ್ತಾಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗುತ್ತದೆ.
ಕಡೆಯ ಸ್ಥಾನಗಳಲ್ಲಿ ಉತ್ತರಾಖಂಡ ಸಿಕ್ಕಿಂ, ಪುದುಚೇರಿ, ಮೇಘಾಲಯಗಳಿದ್ದು, ಗೋವಾ 9 ಮತ್ತು ಮಿಜೋರಂ 10ನೇ ಸ್ಥಾನಕ್ಕೆ ಕುಸಿದಿವೆ.
ಕರ್ನಾಟಕಕ್ಕೆ ವರವಾದ ಅಂಶಗಳು: ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ನಮ್ಮ ರಾಜ್ಯ ಈ ಸಲ 2ನೇ ಸ್ಥಾನಕ್ಕೇರಿದೆ. ಶಿಕ್ಷಣದಲ್ಲಿ 19ನೇ ಸ್ಥಾನದಿಂದ 8ನೇ ಸ್ಥಾನ, ಆಡಳಿತದಲ್ಲಿ 18ನೇ ಸ್ಥಾನದಿಂದ 13ನೇ ಸ್ಥಾನಕ್ಕೇರಿದೆ. ಇನ್ನು ನಿಯತಕಾಲಿಕೆ ಸೇರಿಸಿರುವ ಹೊಸ ವಿಭಾಗಗಳಾದ ಒಳಗೊಳ್ಳುವಿಕೆ ಅಭಿವೃದ್ಧಿಯಲ್ಲಿ 13ನೇ ಸ್ಥಾನ, ಪರಿಸರ ಸಂರಕ್ಷಣೆಯಲ್ಲಿ 7ನೇ ಸ್ಥಾನ, ಸ್ವಚ್ಛ ಅಭಿಯಾನದಲ್ಲಿ 3ನೇ ಸ್ಥಾನ ಪಡೆದಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ಕರ್ನಾಟಕ 8ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕೃಷಿ ಉದ್ಯೋಗವನ್ನು ತೊರೆಯುವುದು, ಮಳೆ ಬಾರದೆ ಬರಗಾಲ ಉಂಟಾಗಿರುವುದು ಕಾರಣವಾಗಿರಬಹುದು. ಅಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ 11ನೇ ಸ್ಥಾನದಿಂದ 13ನೇ ಸ್ಥಾನಕ್ಕೆ, ಮೂಲಸೌಕರ್ಯದಲ್ಲಿ 6ರಿಂದ 18ನೇ ಸ್ಥಾನಕ್ಕೆ ಮತ್ತು ಸಣ್ಣ ಆರ್ಥಿಕತೆಯಲ್ಲಿ 7ರಿಂದ 12ನೇ ಸ್ಥಾನಕ್ಕೆ ಕರ್ನಾಟಕ ಕುಸಿದಿದೆ.
Advertisement