ಸರ್ಕಾರದ ಅಧಿಸೂಚನೆಯನ್ನು ಒಪ್ಪದ ನಿವೃತ್ತ ಯೋಧರು

ಕೇಂದ್ರ ಸರ್ಕಾರ ನಿವೃತ್ತ ಯೋಧರಿಗೆ ಸಮಾನ ಶ್ರೇಣಿ, ಸಮಾನ ವೇತನ ಪಿಂಚಣಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ...
ಪ್ರತಿಭಟನಾನಿರತ ಮಾಜಿ ಯೋಧರು
ಪ್ರತಿಭಟನಾನಿರತ ಮಾಜಿ ಯೋಧರು

ನವದೆಹಲಿ: ಕೇಂದ್ರ ಸರ್ಕಾರ ನಿವೃತ್ತ ಯೋಧರಿಗೆ ಸಮಾನ ಶ್ರೇಣಿ, ಸಮಾನ ವೇತನ ಪಿಂಚಣಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಶನಿವಾರ ಹೊರಡಿಸಿದ್ದ ಅಧಿಸೂಚನೆಯನ್ನು ಮಾಜಿ ಯೋಧರು ತಿರಸ್ಕರಿಸಿದ್ದಾರೆ.

''ಇದು ಸಮಾನ ವೇತನ, ಸಮಾನ ಪಿಂಚಣಿಯಲ್ಲ. ಇದು ಒಂದು ಸಲ ಮಾತ್ರ ವೇತನ ಹೆಚ್ಚಳವಷ್ಟೆ.ನಾವು ಈ ಅಧಿಸೂಚನೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಈ ಅಧಿಸೂಚನೆ ಸರ್ಕಾರ ಪ್ರಬುದ್ಧತೆಯಲ್ಲಿ ಕೊರತೆ ಹೊಂದಿರುವುದನ್ನು ತೋರಿಸುತ್ತದೆ ಎಂದು ನಿವೃತ್ತ ವಿಂಗ್ ಕಮಾಂಡರ್ ಸಿ.ಕೆ.ಶರ್ಮ ತಿಳಿಸಿದ್ದಾರೆ.

ಈ ಹಿಂದಿನ ಪಿಂಚಣಿದಾರರ ಪಿಂಚಣಿಯನ್ನು 2013ರ ನಿವೃತ್ತರ ಪಿಂಚಣಿಯ ಆಧಾರದ ಮೇಲೆ ಮರುನಿಗದಿಮಾಡಲಾಗುತ್ತದೆ. ಆಯಾ ಶ್ರೇಣಿ ಮತ್ತು ಸೇವಾವಧಿಗೆ ಸಂಬಂಧಿಸಿ ಗರಿಷ್ಠ ಮತ್ತು ಕನಿಷ್ಠ ಪಿಂಚಣಿಗಳ ಸರಾಸರಿಯನ್ನು ಲೆಕ್ಕಿಸಲಾಗುವುದು. 2014ರ ಜುಲೈ 1ರಿಂದ ಇದು ಪೂರ್ವಾನ್ವಯವಾಗಲಿದೆ. ಇನ್ನು ಮುಂದೆ ನಿವೃತ್ತರಾಗಲಿರುವವರಿಗೆ ಇದು ಅನ್ವಯವಾಗುವುದಿಲ್ಲ. ಭವಿಷ್ಯದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಪಿಂಚಣಿ ಮರುನಿಗದಿ ಮಾಡಲಾಗುತ್ತದೆ ಎಂಬ ಅಂಶಗಳು ಅಧಿಸೂಚನೆಯಲ್ಲಿವೆ.

ಸಮಾನ ಶ್ರೇಣಿ ಹುದ್ದೆಯಲ್ಲಿದ್ದವರಿಗೆ ಸಮಾನ ಪಿಂಚಣಿ ನೀಡಬೇಕೆಂದು ಆಗ್ರಹಿಸಿ,ಪಿಂಚಣಿ ನಿಗದಿಗೆ ನಿವೃತ್ತಿ ವರ್ಷವನ್ನು ಹಿನ್ನೆಲೆಯಾಗಿಟ್ಟುಕೊಳ್ಳುವುದನ್ನು ವಿರೋಧಿಸಿ ನಿವೃತ್ತ ಯೋಧರು ಹಕ್ಕೊತ್ತಾಯ ಆರಂಭಿಸಿದ್ದರು. ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಈ ಯೋಜನೆಗೆ ಅಧಿಸೂಚನೆ ಹೊರಡಿಸುವುದಾಗಿ ಸರ್ಕಾರ ಹೇಳಿತ್ತು. ವಿಳಂಬ ನೀತಿಯಿಂದ ಬೇಸತ್ತ ನಿವೃತ್ತ ಯೋಧರು ತಮ್ಮ ಪ್ರಶಸ್ತಿ ಪದಕಗಳನ್ನು ಸರ್ಕಾರಕ್ಕೆ ವಾಪಸು ನೀಡಲು ನಿರ್ಧರಿಸಿದ್ದರು. ಸಮಾನ ಪಿಂಚಣಿ ಅಧಿಸೂಚನೆಯನ್ನು ದೀಪಾವಳಿ ಕೊಡುಗೆಯಾಗಿ ನೀಡುವುದಾಗಿ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com