ಕಾಂಗ್ರೆಸ್‍ನ ತಂತ್ರ ಫಲ ಕೊಟ್ಟಿತು

ಬಿಜೆಪಿ ನೇತೃತ್ವದ ಮೈತ್ರಿಕೂಟದ ವಿರುದ್ಧ ಬಿಹಾರದಲ್ಲಿ ಜಾತ್ಯಾತೀತ ಮಹಾಮೈತ್ರಿ ಕೂಟ ರಚನೆಯಲ್ಲಿ ಕಾಂಗ್ರೆಸ್‍ನ ಪಾತ್ರ ಮಹತ್ವದ್ದು. ಬಿಜೆಪಿ ವಿರುದ್ಧ ...
ಬಿಹಾರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅಶೋಕ್ ಚೌಧರಿ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್
ಬಿಹಾರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅಶೋಕ್ ಚೌಧರಿ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್
ಪಟನಾ : ಬಿಜೆಪಿ ನೇತೃತ್ವದ ಮೈತ್ರಿಕೂಟದ ವಿರುದ್ಧ  ಬಿಹಾರದಲ್ಲಿ  ಜಾತ್ಯಾತೀತ ಮಹಾಮೈತ್ರಿ ಕೂಟ ರಚನೆಯಲ್ಲಿ ಕಾಂಗ್ರೆಸ್‍ನ ಪಾತ್ರ ಮಹತ್ವದ್ದು. ಬಿಜೆಪಿ ವಿರುದ್ಧ  ಜಾತ್ಯತೀತ ಶಕ್ತಿಗಳು ಒಂದುಗೂಡಿ ಹೋರಾಟ ನಡೆಸಬೇಕೆನ್ನುವುದು  ಕಾಂಗ್ರೆಸ್‍ನದೇ ಐಡಿಯಾ.  ಇಂಥದ್ದೊಂದು ಐಡಿಯಾವನ್ನು ಕಾರ್ಯರೂಪಕ್ಕಿಳಿಸುವಲ್ಲಿ ಅದು ಯಶಸ್ವಿಯೂ ಆಯಿತು . ಅಲ್ಲದೆ, ಬಿಹಾರದಲ್ಲಿ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುವ ಸಾಮರ್ಥ್ಯವೂ ಪಕ್ಷಕ್ಕಿರಲಿಲ್ಲ. ಒಂದು ವೇಳೆ ಸ್ಪರ್ಧಿಸಿದರೆ ಮುಖಭಂಗ ಸಾಧ್ಯತೆಯೇ ಹೆಚ್ಚಿತ್ತು. ಹಾಗಾಗಿ ಈ ಬಾರಿ ಅದು ಬಿಹಾರದಲ್ಲಿ ಬುದ್ಧಿವಂತ ನಡೆಯನ್ನು ಅನುಸರಿಸಿತು. ಈ ಬಾರಿ ನಿತೀಶ್ ಕುಮಾರ್ ಜತೆಗೆ ದಿಢೀರ್ ಆಗಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ 40   ಸ್ಥಾನಗಳಲ್ಲಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿತು. ನಿತೀಶ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು. ಈ  ಅನಿರೀಕ್ಷಿತ  ನಡೆಯಿಂದ ಸ್ವತಃ ಲಾಲು ವಿಚಲಿತರಾದರು. ಜತೆಗೆ 100 ಸ್ಥಾನಗಳಲ್ಲಿ ಸ್ಪರ್ಧಿಸುವ ನಿತೀಶ್ ಪ್ರಸ್ತಾಪ ಒಪ್ಪಿಕೊಂಡರು. ಕಾಂಗ್ರೆಸ್- ನಿತೀಶ್ ಅವರ ಈ ನಡೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೂ ಅನಿರೀಕ್ಷಿತವಾಗಿತ್ತು. ಲಾಲು ಯಾವುದೇ ಕಾರಣಕ್ಕೂ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ನಿತೀಶ್ ರಿಗೆ ಅಷ್ಟು  ಸ್ಥಾನ ಬಿಟ್ಟುಕೊಡಲಿಕ್ಕಿಲ್ಲ ಎಂದೇ ಭಾವಿಸಿದ್ದರು. ಸೀಟು ಹಂಚಿಕೆಗೆ ಸಂಬಂಧಿಸಿ ಲಾಲು  ಹಾಗೂ ನಿತೀಶ್ ಮಾತುಕತೆಗೆ ಕೂರುವ  ಮುನ್ನವೇ  ಕಾಂಗ್ರೆಸ್- ಜೆಡಿಯು ಜತೆಗೆ ಮೈತ್ರಿ ಮಾಡಿ ಕೊಂಡಿದ್ದರಿಂದ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿ ಯಿತು . ಲಾಲು ಯಾದವ್ ಅವರಿಗೂ ತ್ರಿಕೋನ ಸ್ಪರ್ಧೆ ಬೇಕಿರಲಿಲ್ಲ.
ಕೆಲವು ಕಡೆ ನಿತೀಶ್ ಬೆಂಬಲಿಗರು ಕಾಂಗ್ರೆಸ್  ಚಿಹ್ನೆಯಡಿ ಸ್ಪರ್ಧಿಸಿದ್ದಾರೆ. ಅಷ್ಟರ ಮಟ್ಟಿಗೆ ನಿತೀಶ್ ವಿಚಾರದಲ್ಲಿ ಕಾಂಗ್ರೆಸ್ ಉದಾರಿಯಾಗಿ ವರ್ತಿಸಿತ್ತು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್  ಇಂಥ ಹೆಜ್ಜೆ ಇಟ್ಟದ್ದು ಯಾಕೆ ಎನ್ನುವ   ಪ್ರಕಶ್ನೆ ಮೂಡಬಹುದು. ಕಾರಣ ಕಾಂಗ್ರೆಸ್‍ಗೆ ತನ್ನ ಗೆಲುವಿಗಿಂತ ಜಾತ್ಯತೀತ ಶಕ್ತಿಗಳ ಗೆಲುವೇ ಮುಖ್ಯವಾಗಿತ್ತು.
ಇಬ್ಬರ ಜಗಳದಲ್ಲಿ ಲಾಭ
ಬಿಜೆಪಿ- ಮಹಾಮೈತ್ರಿಕೂಟ ಸಂಘರ್ಷದಲ್ಲಿ ನಿಜಕ್ಕೂ ಲಾಭವಾದದ್ದು ಕಾಂಗ್ರೆಸ್‍ಗೆ. ಅದು ಸ್ಪರ್ಧಿಸಿದ್ದೇ 41 ಸ್ಥಾನಗಳಲ್ಲಿ. ಅದರಲ್ಲಿ 26 ಸ್ಥಾನಗಳು ಕಾಂಗ್ರೆಸ್‍ಗೆ ದಕ್ಕಿವೆ.  2010ರಲ್ಲಿ ಕಾಂಗ್ರೆಸ್ ಎಲ್ಲ 243 ಸೀಟುಗಳಲ್ಲಿ ಸ್ಪರ್ಧಿಸಿದ್ದರೂ ಅದಕ್ಕೆ ಕೇವಲ 4 ಸೀಟು ದೊರೆತಿದ್ದವು. ಈ ಸಲ ಸ್ಥಾನಗಳು ಹೆಚ್ಚು ದೊರೆತಿದ್ದರೂ, ಶೇಕಡಾವಾರು ಮತಗಳಿಕೆಯಲ್ಲಿ ಮಾತ್ರ ಕಾಂಗ್ರೆಸ್‍ಗೆ ಕೊಂಚ ಹಿನ್ನಡೆಯಾಗಿದೆ. ಕಳೆದ ಬಾರಿ ಶೇ.8.37 ಸಿಕ್ಕಿದ್ದರೆ, ಈ ಬಾರಿ  ಅದು ಶೇ.6.7ಕ್ಕಿಳಿದಿದೆ. ಆದರೆ ಕಳೆದ ಲೋಕಸಭೆ ಚುನಾವಣೆಯ ಭಾರಿ ಮುಖಭಂಗಕ್ಕೆ ಹೋಲಿಸಿದರೆ ಇದು ಮಹಾ ವಿಜಯವೆಂದೇ ಹೇಳಬೇಕು. ಆ ಚುನಾವಣೆಯಲ್ಲಿ ದೇಶದ 543 ಸ್ಥಾನಗಳಲ್ಲಿ ಕೇವಲ 44 ಮಾತ್ರ ಕಾಂಗ್ರೆಸ್ ದಕ್ಕಿತ್ತು.  ದೆಹೆಲಿಯ  ಚುನಾವಣೆಯಲ್ಲಿ ಸೊನ್ನೆ. ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಜಮ್ಮು ಕಾಶ್ಮೀರಗಳಲ್ಲೂ ಸೋತಿತ್ತು. ಸ್ವಾತಂತ್ರ್ಯಾನಂತರ ಬಹುಕಾಲ ಬಿಹಾರದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಇತ್ತೀಚೆಗೆ  ಅಲ್ಲಿ ನಾಮಾವಶೇಷವಾಗುವ ಹಂತ ತಲುಪಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com