ನ.20ಕ್ಕೆ ಮತ್ತೆ ಸಿಎಂ ಆಗಿ ನಿತೀಶ್ ಪ್ರಮಾಣ, ಲಾಲುಗೆ ಹೆಚ್ಚು ಸಚಿವ ಸ್ಥಾನ ಸಾಧ್ಯತೆ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದೆ.
ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರು ನವೆಂಬರ್ 20ರಂದು 5ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ನೂತನ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರೆಯಲಿದೆ ಎನ್ನಲಾಗಿದೆ
ನಿತಿಶ್ ಕುಮಾರ್ ಅವರು ಪ್ರತಿ ಐದು ಶಾಸಕರಿಗೆ ಒಂದು ಸಚಿವ ಸ್ಥಾನ ಎಂಬ ಫಾರ್ಮುಲಾವನ್ನು ಸಿದ್ಧಪಡಿಸಿದ್ದು, ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಆರ್ ಜೆಡಿ ಹೆಚ್ಚು ಸಚಿವರನ್ನು ಹೊಂದಲಿದೆ ಎನ್ನಲಾಗಿದೆ.
ಮಹಾಮೈತ್ರಿಕೂಟದ ನೂತನ ಶಾಸಕರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಹಾಮೈತ್ರಿಕೂಟದ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತಿದೆ. ಸಂವಿಧಾನದ ಪ್ರಕಾರ, ಬಿಹಾರದಲ್ಲಿ ಮುಖ್ಯಮಂತ್ರಿ ಸೇರಿ 36 ಮಂದಿ ಸಚಿವರು ನೂತನ ಕ್ಯಾಬಿನೆಟ್ ನಲ್ಲಿ ಇರಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿತ್ತು. ಜೆಡಿಯು ಮಹಾಮೈತ್ರಿ ಕೂಟ 178 ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಿತ್ತು. ಎನ್ ಡಿಎ ಮೈತ್ರಿಕೂಟ 58 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿ ಕೂಟ ಇದೀಗ ಬಿಹಾರದಲ್ಲಿ ಸರ್ಕಾರ ರಚನೆಗಾಗಿ ಮಾತುಕತೆ ನಡೆಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ