
ನವದೆಹಲಿ; ಸರ್ಕಾರದ ದುರ್ಬಲ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಹೋರಾಟ ಬುಧವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಸರ್ಕಾರದ ಧೋರಣೆ ಖಂಡಿಸಿ ಮಾಜಿ ಯೋಧರಿಬ್ಬರು ತಮ್ಮ ಸೇವಾ ಪದಕಗಳಿಗೆ ಬೆಂಕಿ ಹಚ್ಚಲು ಯತ್ನಿಸಿದರು.
ಉಪವಾಸ ಸತ್ಯಾಗ್ರಹ ಕುಳಿತಿದ್ದ ಮಾಜಿ ಸೈನಿಕರಿಬ್ಬರು, ಕ್ಯಾಮೆರಾಗಳ ಎದುರು ತಮ್ಮ ಪದಕಗಳನ್ನು ಸುಟ್ಟು ಹಾಕಲು ಯತ್ನಿಸಿದರು. ಈ ವೇಳೆ, ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ಹಾಗೂ ಇತರರು ಅವರನ್ನು ತಡೆದರು.
ಮಾಜಿ ಯೋಧರು ಪದಕಗಳನ್ನು ಸುಡುವ ಬಗ್ಗೆ ಬುಧವಾರ ಬೆಳಿಗ್ಗೆಯೇ ಮಾಹಿತಿ ಸಿಕ್ಕಿತ್ತು. ಈ ಕುರಿತು ಮಾಧ್ಯಮದವರು ಪ್ರತಿಭಟನಾ ನಿರತರನ್ನು ಪ್ರಶ್ನಿಸಿದ್ದರು. ಆದರೆ, ಇದನ್ನು ಅವರು ನಿರಾಕರಿಸಿದ್ದರು.
ಈ ಘಟನೆಯ ಬಳಿಕ ಸುಮಾರು 50 ಮಾಜಿ ಯೋಧರು ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ಹೊರಟರು. ಆದರೆ ದೆಹಲಿ ಪೊಲೀಸರು ಅವರನ್ನು ರೈಲ್ ಭವನದ ಬಳಿಯೇ ತಡೆದರು. ನ್ಯಾಯಾಂಗ ಸಮಿತಿ ಪರಿಹರಿಸಲಿದೆ: ಇನ್ನು, ಹೋರಾಟ ಕೈಬಿಡುವಂತೆ ಮಾಜಿ ಯೋಧರಲ್ಲಿ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಒಆರ್‌ಒಪಿ ಯೋಜನೆ ಸಂಬಂಧಿತ ಸಮಸ್ಯೆಗಳನ್ನು ಸರ್ಕಾರ ರಚಿಸಲಿರುವ ನ್ಯಾಯಾಂಗ ಸಮಿತಿ ಪರಿಹರಿಸಲಿದೆ ಎಂದಿದ್ದಾರೆ.
ಮತ್ತೊಂದೆಡೆ, ಸರ್ಕಾರ ವಿರುದ್ಧದ ಹೋರಾಟದ ಭಾಗವಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಾಜಿ ಯೋಧರು ಮಂಗಳವಾರ ದೆಹಲಿ, ಹರಿಯಾಣ ಹಾಗೂ ಪಂಜಾಬ್‌ನಲ್ಲಿ ತಮ್ಮ ಸೇವಾ ಪದಕಗಳನ್ನು ಮರಳಿಸಿದ್ದಾರೆ.
Advertisement